ಸೋಮವಾರಪೇಟೆ, ಜು. ೧೮: ಲೇಖಕರಿಂದ ಸಾಮಾಜಿಕ ಬದಲಾವಣೆ ಸಾಧ್ಯ. ಸಮಾಜವನ್ನು ಚಿಂತನೆಗೆ ಹಚ್ಚುವ ಶಕ್ತಿ ಲೇಖಕರಿಗಿದೆ ಎಂದು ಅರಸಿನಕುಪ್ಪೆ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‌ನಾಥ್‌ಜೀ ಅಭಿಮತ ವ್ಯಕ್ತಪಡಿಸಿದರು.

ಕನ್ನಡ ಸಿರಿ ಸ್ನೇಹ ಬಳಗದ ಆಶ್ರಯದಲ್ಲಿ ಇಲ್ಲಿನ ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಯಡವನಾಡು ಗ್ರಾಮದ ಯುವ ಬರಹಗಾರ ಹೇಮಂತ್ ಪಾರೇರಾ ವಿರಚಿತ ಬೆಳ್ಳಿ ಗೆಜ್ಜೆ ಕವನ ಸಂಕಲನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಹಿತಿಗಳು, ಬರಹಗಾರರು ಸಮಾಜದ ಮಾರ್ಗದರ್ಶಕರಿದ್ದಂತೆ. ಕನ್ನಡ ಭಾಷೆ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಇವರುಗಳ ಪಾತ್ರ ಮಹನೀಯ. ಬರಹಗಾರರ ಕೃತಿಗಳನ್ನು ಖರೀದಿಸಿ ಓದುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಮಾಡಲು ಹಲವಷ್ಟು ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹೋರಾಡಿದ್ದಾರೆ. ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಕನ್ನಡ ಭಾಷೆ ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮ ಮಾತೃ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.

ಕೃತಿಯನ್ನು ಹಿರಿಯ ಸಾಹಿತಿ ಭಾರಧ್ವಾಜ್ ಕೆ. ಆನಂದತೀರ್ಥ ಬಿಡುಗಡೆಗೊಳಿಸಿದರು. ನಂತರ ಮಾತನಾಡಿ, ಸರಳವಾಗಿ ಬರೆದ ಕವನಗಳು ಓದುಗರ ಹೃದಯಕ್ಕೆ ತಲುಪುತ್ತವೆ. ಯಾವುದೇ ಕಥೆ-ಕವನಗಳು ಓದುಗರನ್ನು ಓದಿಸಿಕೊಂಡು ಹೋಗಬೇಕು. ವಿಷಯ ಹಾಗೂ ಪದಗಳ ಜೋಡಣೆ ಬರಹಗಾರರಿಗೆ ಬಹು ಮುಖ್ಯ. ಇದನ್ನು ಬೆಳ್ಳಿ ಗೆಜ್ಜೆಯ ಲೇಖಕರು ತಮ್ಮ ಕೃತಿಯಲ್ಲಿ ಮೂಡಿಸಿದ್ದಾರೆ ಎಂದರು.

ಕೃತಿ ಪರಿಚಯವನ್ನು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಿರಿ ಸ್ನೇಹ ಬಳಗದ ಜಿಲ್ಲಾ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ವಹಿಸಿದ್ದರು. ವೇದಿಕೆಯಲ್ಲಿ ಬರಹಗಾರರಾದ ಪವಿತ್ರ ಹೆತ್ತೂರು, ಉದ್ಯಮಿ ಸುಗುರಾಜ್ ಕುಟ್ಟಪ್ಪ ಇದ್ದರು. ಬೆಳ್ಳಿಗೆಜ್ಜೆಯ ಲೇಖಕ ಹೇಮಂತ್ ಪಾರೇರಾ, ರಾಣಿ ರವೀಂದ್ರ, ಶರ್ಮಿಳಾ ರಮೇಶ್, ವಿಜಯ್ ಹಾನಗಲ್ ಕಾರ್ಯಕ್ರಮ ನಿರ್ವಹಿಸಿದರು.