ಮಡಿಕೇರಿ, ಜು. ೯: ಉತ್ತರ ಕೊಡಗಿನ ಸೂರ್ಲಬ್ಬಿ ನಾಡು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮುಂದು ವರಿದಿದೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಂಕ್ಯ ಗ್ರಾಮದ ರೈತ ಎಂ.ಟಿ. ಪೂವಯ್ಯ ‘ಶಕ್ತಿ’ ದೈನಿಕ ದೊಂದಿಗೆ ನೋವು ತೋಡಿ ಕೊಂಡಿದ್ದು, ಕಾಡಾನೆಗಳು ಬೀಡು ಬಿಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಳೆಯ ನಡುವೆ ತಿರುಗಾಡಲು ಭಯ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಂಕ್ಯ, ಕಿಕ್ಕರಳ್ಳಿ, ಕುಂಬಾರಗಡಿಗೆ ಹಾಗೂ ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಅನೇಕ ರೈತರ ಗದ್ದೆಗಳಲ್ಲಿ ಕೃಷಿ ಫಸಲು ತುಳಿದು ಹಾಳುಮಾಡಿರುವ ಕಾಡಾನೆಗಳು ಕಾಫಿ, ಏಲಕ್ಕಿ, ಬಾಳೆತೋಟಗಳಲ್ಲಿ ನಷ್ಟಗೊಳಿಸಿವೆ ಎಂದು ದೂರಿದ್ದಾರೆ. ಮಳೆಯ ನಡುವೆ ನಿರಂತರವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆನೆಗಳನ್ನು ಹಿಮ್ಮೆಟ್ಟಿಸಿದರೂ ಮತ್ತೆ ಮತ್ತೆ ಉಪಟಳ ಉಂಟುಮಾಡಿವೆ ಎಂದು ಅಳಲು ತೋಡಿಕೊಂಡಿದ್ದು, ಸರ್ಕಾರ ನೊಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ