ಕುಶಾಲನಗರ, ಜು. ೯: ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಕುಶಾಲನಗರ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಜೀವನದಿ ಕಾವೇರಿಗೆ ಕುಶಾಲನಗರದಲ್ಲಿ ಹುಣ್ಣಿಮೆ ಅಂಗವಾಗಿ ೧೭೪ನೇ ಮಹಾ ಆರತಿ ಕಾರ್ಯಕ್ರಮ ತಾ. ೧೦ ರಂದು (ಇಂದು) ನಡೆಯಲಿದೆ.
ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ಸಂಜೆ ೫:೩೦ಕ್ಕೆ ಆರತಿ ಕಾರ್ಯಕ್ರಮ ಜರುಗಲಿದೆ.
ಹುಣ್ಣಿಮೆ ಅಂಗವಾಗಿ ಭಾಗಮಂಡಲ ಸಂಗಮದಲ್ಲಿ ಸೇರಿದಂತೆ ನದಿ ತಟದ ವಿವಿಧ ಗ್ರಾಮಗಳಲ್ಲಿ ನಮಾಮಿ ಕಾವೇರಿ ತಂಡದ ಮೂಲಕ ಏಕಕಾಲದಲ್ಲಿ ಕಾವೇರಿಗೆ ಮಹಾ ಆರತಿ ಕಾರ್ಯಕ್ರಮ ನಡೆಯುವುದು.
ಕುಶಾಲನಗರ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮಾ ಪೂಜಾ ಕಾರ್ಯಕ್ರಮ ಅಂಗವಾಗಿ ಬೆಳಿಗ್ಗೆ ೯ ಗಂಟೆಗೆ ಕುಶಾಲನಗರ ದೇವಾಲಯ ಒಕ್ಕೂಟ ಸಮಿತಿಯ ಪೂಜಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೧೨:೩೦ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದೆ.