ಸಿದ್ದಾಪುರ, ಜು. ೯: ಕಾನೂನು ಉಲ್ಲಂಘನೆ ಮಾಡಿ ತಡರಾತ್ರಿ ಮರಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮಗುಚಿ ಬಿದ್ದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ಮಳೆಗಾಲದಲ್ಲಿ ಅಧಿಕ ತೂಕದ ಮರಗಳನ್ನು ಲಾರಿಯಲ್ಲಿ ಸಾಗಾಟ ಮಾಡಬಾರದೆಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಕೂಡ ಯಾರಿಗೂ ತಿಳಿಯದಂತೆ ತಡರಾತ್ರಿ ಅಮ್ಮತ್ತಿ ರಸ್ತೆಯ ಮೂಲಕ ಸಿದ್ದಾಪುರ ಮಾರ್ಗವಾಗಿ ಮರಗಳನ್ನು ತುಂಬಿದ ಲಾರಿಯೊಂದು ಪಿರಿಯಾ ಪಟ್ಟಣದತ್ತ ತೆರಳುತ್ತಿರುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಸಿದ್ದಾಪುರದ ಅಂಬೇಡ್ಕರ್ ನಗರದ ಸಮೀಪ ರಸ್ತೆ ಬದಿ ಮಗುಚಿಕೊಂಡಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಲಾರಿಯು ತಮಿಳುನಾಡು ರಾಜ್ಯಕ್ಕೆ ಸೇರಿದಾಗಿದ್ದು. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾನೂನು ಉಲ್ಲಂಘನೆ ಮಾಡಿ, ಜಿಲ್ಲಾಧಿಕಾರಿ ಆದೇಶವನ್ನು ಮೀರಿ ತಡರಾತ್ರಿ ಮರ ಸಾಗಾಟ ಮಾಡುತ್ತಿದ್ದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸಾರಿಗೆ ಇಲಾಖೆಗೆ ಸಿದ್ದಾಪುರ ಪೊಲೀಸರು ಶಿಫಾರಸ್ಸು ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶ ಮೀರಿ ಮರಸಾಗಾಟ ಮಾಡುವುದು ಕಂಡು ಬಂದಲ್ಲಿ ಅಂತಹ ವಾಹನಗಳ ವಿರುದ್ಧ ಹಾಗೂ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ. ರಸ್ತೆ ಬದಿಯಲ್ಲಿ ಮರಗಳನ್ನು ಲೋಡ್ ಮಾಡುವುದಾಗಲಿ ಹಾಗೂ ಟಿಂಬರ್‌ಗಳನ್ನು ಸಾಗಾಟ ಮಾಡುವುದು ಕಂಡುಬAದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಮಂಜುನಾಥ್ ಮನವಿ ಮಾಡಿದ್ದಾರೆ. -ವಾಸು