ಚೆಯ್ಯಂಡಾಣೆ, ಜು. ೯: ನಾಪೋಕ್ಲುವಿನಿಂದ ಬಾವಲಿ, ಎಡಪಾಲ, ಕಡಂಗ, ಕೆದಮುಳ್ಳೂರು, ವೀರಾಜಪೇಟೆ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕಳೆದ ನಾಲ್ಕು ವರ್ಷದಿಂದ ಸ್ಥಗಿತಗೊಂಡಿತ್ತು.

ಈ ವ್ಯಾಪ್ತಿಯ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಲವಾರು ಬಾರಿ ಮನವಿ ಸಲ್ಲಿಸಿದರೂ ಬಸ್ ಸೇವೆ ಪುನರಾರಂಭಗೊAಡಿರಲಿಲ್ಲ.

ಈ ಬಗ್ಗೆ ಈ ವ್ಯಾಪ್ತಿಯ ಸಾರ್ವಜನಿಕರು ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕ ಪೊನ್ನಣ್ಣ ನೂತನ ಬಸ್ ಸಂಚಾರಕ್ಕೆ ನಾಪೋಕ್ಲುವಿನಲ್ಲಿ ಚಾಲನೆ ನೀಡಿದರು.

ಬಸ್ ಚಲಾಯಿಸಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಸ್ಥಳೀಯರ ಬೇಡಿಕೆಗೆ ಸ್ಪಂದಿಸಿ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರವನ್ನು ಮತ್ತೆ ಚಾಲನೆಗೆ ತಂದಿದ್ದೇವೆ. ಹಲವಾರು ಮನವಿಗಳ ನಂತರ ಕೆಎಸ್‌ಆರ್‌ಟಿಸಿಯವರು ಬಸ್ ಸಂಚಾರಕ್ಕೆ ಅನುಮತಿಸಿದ್ದಾರೆ. ಈ ಬಸ್ ವ್ಯವಸ್ಥೆಯಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.

ನಾಲ್ಕು ವರ್ಷಗಳ ಹಿಂದೆ ಸಂಚರಿಸುತ್ತಿದ್ದ ಬಸ್ ಮೈಸೂರು ಡಿಪೋಗೆ ಸೇರಿದ್ದಾಗಿತ್ತು. ಇದೀಗ ನೂತನ ಬಸ್ ಮಡಿಕೇರಿ ಡಿಪೋಗೆ ಸೇರಿದ್ದು, ಮಡಿಕೇರಿಯಿಂದ ಬೆಳಿಗ್ಗೆ ೭ ಗಂಟೆಗೆ ಹೊರಟು ನಾಪೋಕ್ಲು, ಬಾವಲಿ, ಎಡಪಾಲ, ಕಡಂಗ, ಕೆದಮುಳ್ಳೂರು, ವೀರಾಜಪೇಟೆ ಮಾರ್ಗವಾಗಿ ಮೈಸೂರಿಗೆ ಸಂಚರಿಸಲಿದೆ. ಮಧ್ಯಾಹ್ನ ೩.೩೦ಕ್ಕೆ ವೀರಾಜಪೇಟೆಯಿಂದ ಹೊರಡಲಿದೆ.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಶಶಿ ಮಂದಣ್ಣ, ಕೆಡಿಪಿ ಸದಸ್ಯ ಲವ ಚಿಣ್ಣಪ್ಪ, ವಲಯಾಧ್ಯಕ್ಷ ಕುಶು ಕುಶಾಲಪ್ಪ, ಅಬ್ದುಲ್ ರಹ್ಮಾನ್, ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಡಿಸಿಸಿ ಸದಸ್ಯ ಶಾಫಿ, ಪಂಚಾಯಿತಿ ಸದಸ್ಯರಾದ ಸಾಬ ತಿಮ್ಮಯ್ಯ, ಟಿ.ಎ. ಮಹಮ್ಮದ್, ಮಹಮ್ಮದ್ ಖುರೇಶಿ, ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್‌ನ ಪದಾಧಿಕಾರಿಗಳು, ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಸದಸ್ಯ ಮೊಹಮ್ಮದ್, ಕಲಿಯಂಡ ಸಂಪನ್ ಅಯ್ಯಪ್ಪ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಮತ್ತಿತರರು ಹಾಜರಿದ್ದರು.