ಮಡಿಕೇರಿ, ಜು. ೯: ಜಿಲ್ಲೆಯ ವಿವಿಧೆಡೆ ಅಪಾಯಕಾರಿ ಸ್ಥಳಗಳಲ್ಲಿ ಅನಧಿಕೃತ ರೆಸಾರ್ಟ್ಗಳನ್ನು ನಿರ್ಮಿಸಲಾಗಿದ್ದು, ಇವುಗಳನ್ನು ನೆಲಸಮ ಮಾಡುವಂತೆ ಎನ್ರ‍್ನಮೆಂಟ್ ಮತ್ತು ಹೆಲ್ತ್ ಫೌಂಡೇಷನ್ ಅಧ್ಯಕ್ಷ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೮ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ನಂತರ ಎಚ್ಚೆತ್ತ ಸರಕಾರ ತಾ. ೪.೬.೨೦೨೦ರಲ್ಲಿ ಕೊಡಗಿನಲ್ಲಿ ವಾಣಿಜ್ಯ ಭೂ ಪರಿವರ್ತನೆಗಾಗಿ ಯಾವುದೇ ಅರ್ಜಿಯನ್ನು ಪರಿಶೀಲಿಸಲು ಮತ್ತು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಭೂ ಪರಿವರ್ತನೆಗೆ ನಿರಾಕರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿ ಆದೇಶಿಸಿದೆ. ಆದರೂ ಹಲವು ಕಡೆಗಳಲ್ಲಿ ಅನಧಿಕೃತವಾಗಿ ಪ್ರಭಾವಿಗಳು ಐಷಾರಾಮಿ ರೆಸಾರ್ಟ್ ನಿರ್ಮಿಸಿದ್ದಾರೆ. ಇದರಿಂದ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿದ್ದು, ಸಾವು-ನೋವು ಸಂಭವಿಸುವ ಆತಂಕ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆದೇಶದ ನಂತರವೂ ಭೂಕುಸಿತ ಪೀಡಿತ ಪ್ರದೇಶಗಳಾದ ಕಿರಗಂದೂರು ಗ್ರಾ.ಪಂ. ವ್ಯಾಪ್ತಿಯ ಬಿಳಿಗೇರಿ, ಮಕ್ಕಂದೂರಿನ ಹಾಲೇರಿ, ಕೆದಕಲ್‌ನ ಮೋದೂರು ಹಾಗೂ ಗಾಳಿಬೀಡು ಭಾಗದಲ್ಲಿ ರೆಸಾರ್ಟ್ಗಳನ್ನು ನಿರ್ಮಿಸಲಾಗಿದೆ. ಆರ್‌ಟಿಐ ಅಡಿ ಮಕ್ಕಂದೂರಿನಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ಕುರಿತು ಮಾಹಿತಿ ಬಯಸಿದ ಸಂದರ್ಭ ಜಿಲ್ಲಾಧಿಕಾರಿಯಿಂದ ‘ಅನುಮತಿ ನೀಡಿಲ್ಲ’ ಎಂದು ಉತ್ತರ ದೊರೆತಿದೆ. ಈ ನಡುವೆ ರೆಸಾರ್ಟ್ ಹೇಗೆ ನಿರ್ಮಾಣವಾಯಿತು? ಎಂದು ಪ್ರಶ್ನಿಸಿದರು.

ಗಾಳಿಬೀಡುವಿನಲ್ಲಿ ನಿರ್ಮಾಣ ಹಂತದಲ್ಲಿರುವ ರೆಸಾರ್ಟ್ ಕೂಡ ಅಪಾಯದ ಸ್ಥಳದಲ್ಲಿದೆ. ತೇವಾಂಶ ಭರಿತ ಗದ್ದೆ ಪ್ರದೇಶಗಳಲ್ಲಿ ರೆಸಾರ್ಟ್ ನಿರ್ಮಾಣವಾಗುತ್ತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ತಕ್ಷಣ ಅನಧಿಕೃತ ರೆಸಾರ್ಟ್ಗಳನ್ನು ನೆಲಸಮಗೊಳಿಸಿ ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಂಘಟಿತ ಹೋರಾಟ ಎಚ್ಚರಿಕೆ

ಅನಧಿಕೃತ ರೆಸಾರ್ಟ್ ನಿರ್ಮಾಣದಿಂದ ಸ್ಥಳೀಯರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಈಗಾಗಲೇ ಅನಧಿಕೃತ ಭೂಪರಿವರ್ತನೆ ಸಂಬAಧ ನ್ಯಾಯಾಂಗ ಹೋರಾಟ ಕೈಗೊಂಡಿದ್ದು, ಜಿಲ್ಲೆಯ ವಿವಿಧ ಸಂಘಟನೆಗಳ ನೆರವಿನೊಂದಿಗೆ ಹೋರಾಟ ರೂಪಿಸಲಾಗುವುದು ಎಂದು ಮುತ್ತಣ್ಣ ಎಚ್ಚರಿಸಿದರು.

ಅಖಿಲ ಕೊಡವ ಸಮಾಜ ಅಧ್ಯಕ್ಷರ ಗಮನ ಸೆಳೆದಿದ್ದು, ನೇತೃತ್ವ ವಹಿಸುವಂತೆ ಕೋರಲಾಗಿದೆ. ಅದೇ ರೀತಿ ಸಮುದಾಯ ಸಂಘಟನೆಗಳು, ಸಾಮಾಜಿಕ ಸಂಘಟನೆಗಳ ಸಹಕಾರವನ್ನೂ ಪಡೆಯಲಾಗುವುದು ಎಂದು ವಿವರಿಸಿದರು.

ಕ್ರಮಕ್ಕೆ ಆಗ್ರಹ

ಕೆದಕಲ್ ನಿವಾಸಿ, ಸಮಾಜ ಸೇವಕ ವೈ.ಟಿ. ಗೋಪಿನಾಥ್ ಮಾತನಾಡಿ, ಅನಧಿಕೃತ ರೆಸಾರ್ಟ್ಗಳ ವಿರುದ್ಧ ಕ್ರಮಕ್ಕೆ ಹಲವು ಬಾರಿ ಸರಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಲೇರಿ ಗ್ರಾಮದ ರೆಸಾರ್ಟ್ ಗದ್ದೆ ಪ್ರದೇಶದಲ್ಲಿದ್ದು, ಅಪಾಯದ ಸಾಧ್ಯತೆ ಹೆಚ್ಚಿದೆ. ಗಾಳಿಬೀಡುವಿನಲ್ಲಿ ಬೆಟ್ಟದ ತುದಿಯಲ್ಲಿ ಕೆಲಸವಾಗುತ್ತಿದೆ. ಕಾಂಕ್ರಿಟ್ ರಸ್ತೆ ನಿರ್ಮಿಸಿ ಜನರನ್ನು ನಂಬಿಸುವ ಕೆಲಸವಾಗುತ್ತಿದೆ. ನಿಯಮಗಳನ್ನು ಗಾಳಿಗೆ ತೂರಿ ಅಕ್ರಮಗಳು ನಡೆಯುತ್ತಿವೆ ಎಂದರು. ಕಿರಗಂದೂರು ಗ್ರಾಮಾಡಳಿತ ಮಂಡಳಿ ಕಾರ್ಯದರ್ಶಿ ಬಿ.ಬಿ. ರಶಿನ್ ಕುಮಾರ್, ಸ್ಥಳೀಯ ನಿವಾಸಿ ಎಸ್.ಸಿ. ಗಿರೀಶ್ ಮಾತನಾಡಿ, ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಮೊದಲಿ ನಿಂದಲೂ ವಿರೋಧವಿದೆ. ಗ್ರಾಮಸಭೆ ನಿರ್ಣಯವನ್ನು ಜಿಲ್ಲಾಧಿಕಾರಿಗೆ ಕಳುಹಿಸದೆ ಪಂಚಾಯಿತಿ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ ಎಂದು ಆರೋಪ ಮಾಡಿದರು. ಮಕ್ಕಳಗುಡಿ ಬೆಟ್ಟದ ಆವರಣವನ್ನು ರೆಸಾರ್ಟ್ ಮಾಲೀಕರಿಗೆ ಗುತ್ತಿಗೆ ನೀಡುವ ಕೆಲಸಗಳು ತೆರೆಮರೆಯಲ್ಲಿ ಆಗುತ್ತಿದೆ. ಅಪಾಯದ ಸ್ಥಳದಲ್ಲಿರುವ ನಿವಾಸಿಗಳನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳುವ ಅಧಿಕಾರಿಗಳು ಪ್ರಭಾವಿ ಉದ್ಯಮಿಗಳ ಒಡೆತನದ ರೆಸಾರ್ಟ್ಗಳ ವಿರುದ್ಧ ಕ್ರಮಕ್ಕೆ ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಗೋಷ್ಠಿಯಲ್ಲಿ ಕಿರಗಂದೂರು ಗ್ರಾಮಾಡಳಿತ ಮಂಡಳಿ ಅಧ್ಯಕ್ಷ ಸಿ.ಕೆ. ಚಿದಾನಂದ್, ಗ್ರಾಮಸ್ಥ ಕೆ.ಜಿ. ನಿತಿನ್ ಹಾಜರಿದ್ದರು.