ಸುAಟಿಕೊಪ್ಪ, ಜು. ೬: ಭಾರೀ ಮಳೆಗಾಳಿಗೆ ಸಮೀಪದ ನಾಕೂರು ಶಿರಂಗಾಲ ಗ್ರಾಮದ ಕಾನ್ ಬೈಲ್ ಬೈಚನಹಳ್ಳಿ ಎಮ್ಮೆಗುಂಡಿ ಮತ್ತು ಶಾಂತಿಗೇರಿ ತೋಟಗಳ ಮೇಲೆ ಹಾದು ಹೋಗಿರುವ ೬೬ ಕೆವಿ ವಿದ್ಯುತ್ ತಂತಿ ತುಂಡಾಗಿ ರಸ್ತೆಯ ಮೇಲೆ ಬಿದ್ದ ಘಟನೆ ಕಾನ್‌ಬೈಲ್ ಬೈಚನಹಳ್ಳಿಯಲ್ಲಿ ನಡೆದಿದ್ದು, ಈ ವೇಳೆ ಉಂಟಾದ ಭಾರೀ ಶಬ್ದಕ್ಕೆ ಅಲ್ಲಿನ ರಸ್ತೆ ಬದಿಯಲ್ಲಿರುವ ಮನೆಗಳ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ೬೬ ಕೆವಿ ವಿದ್ಯುತ್ ತಂತಿ ತುಂಡಾಗಿ ರಸ್ತೆಯ ಮೇಲೆ ಬಿದ್ದಿದ್ದನ್ನು ಕಂಡ ಅಲ್ಲಿನ ನಿವಾಸಿಗಳು ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ನಿಲ್ಲಿಸುವ ಮೂಲಕ ಭಾರೀ ಅನಾಹುತ ಉಂಟಾಗುವುದನ್ನು ತಪ್ಪಿಸಿದ್ದಾರೆ. ಭಾನುವಾರ ಸಂತೆ ದಿನವಾಗಿದ್ದರಿಂದ ನಾಕೂರು ಶಿರಂಗಾಲ, ಕಾನ್‌ಬೈಲ್, ಎಮ್ಮೆಗುಂಡಿ, ಅಂದಗೋವೆ, ಮಳೂರು ಗ್ರಾಮಗಳಿಂದ ಅಧಿಕ ಸಂಖ್ಯೆಯಲ್ಲಿ ಸುಂಟಿಕೊಪ್ಪ ಪಟ್ಟಣಕ್ಕೆ ಗ್ರಾಮಸ್ಥರು ಬರುತ್ತಾರೆ ಹಾಗೂ ವಾಹನಗಳು ಕೂಡ ಆಗಮಿಸುತ್ತವೆ. ಇಂದು ಈ ಘಟನೆ ನಡೆದ ಸಂದರ್ಭ ಕೂಡಲೇ ಕಾನ್‌ಬೈಲ್ ಬೈಚನಹಳ್ಳಿ ನಿವಾಸಿಗಳು ಯಾವುದೇ ಪ್ರಾಣಹಾನಿ ಸಂಭವಿಸದAತೆ ಎಚ್ಚರವಹಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕುಶಾಲನಗರ ಕೆಪಿಟಿಸಿಎಲ್ ಕಚೇರಿಗೆ ಸುಂಟಿಕೊಪ್ಪ ಸೆಸ್ಕ್ ಸಿಬ್ಬಂದಿ ಬಾಷಾ ಅವರು ಮಾಹಿತಿ ನೀಡಿದ ಬಳಿಕ ವಿದ್ಯುತ್ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಸ್ಥಳಕ್ಕೆ ಕುಶಾಲನಗರದಿಂದ ಕೆಪಿಟಿಸಿಎಲ್ ಅಭಿಯಂತರರಾದ ತೀರ್ಥ ಕುಮಾರ್, ಸಿಬ್ಬಂದಿ ಆಗಮಿಸಿ ತುಂಡಾದ ವಿದ್ಯುತ್ ತಂತಿಯನ್ನು ಜೋಡಿಸಿ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.