*ಗೋಣಿಕೊಪ್ಪ, ಜು. ೫ : ರಾಜ್ಯ ಸರ್ಕಾರದ ಯಾವುದೇ ಯೋಜನೆಗಳು ಕೊಡಗಿನಲ್ಲಿ ಅನುಷ್ಠಾನಗೊಂಡಿಲ್ಲ. ಕೇಂದ್ರದ ಎನ್ಡಿಆರ್ಎಫ್ ಅನುದಾನವನ್ನು ರಾಜ್ಯ ಸರ್ಕಾರದ ಅನುದಾನದ ಕಾಮಗಾರಿಗಳು ಎಂದು ಜನರನ್ನು ನಂಬಿಸಲಾಗುತ್ತಿದೆ ಎಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.
ಗೋಣಿಕೊಪ್ಪ ದುರ್ಗಾ ಬೋಜಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ, ಗೋಣಿಕೊಪ್ಪ, ಹಾತೂರು, ಅರುವತ್ತೊಕ್ಲು ಶಕ್ತಿ ಕೇಂದ್ರದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ವಿವಿಧ ಭಾಗ್ಯಗಳನ್ನು ನೀಡುವ ಮೂಲಕ ಸರ್ಕಾರ ಆರ್ಥಿಕ ದಿವಾಳಿತನಕ್ಕೆ ತಲುಪಿದೆ. ಹೀಗಾಗಿ ಜಿಲ್ಲೆಯಲ್ಲಿಯೇ ಅಲ್ಲ, ರಾಜ್ಯದಲ್ಲೇ ಅಭಿವೃದ್ಧಿ ಕಾಮಗಾರಿಗಳು ಮುಂದುವರೆಯುತ್ತಿಲ್ಲ ಎಂದು ಹೇಳಿದರು.
ಜೆಜೆಎಂ ಯೋಜನೆಯಲ್ಲಿ ಹಲವು ಸಮಸ್ಯೆಗಳು ಗಮನಕ್ಕೆ ಬಂದಿದೆ. ಕೆಲವೆಡೆ ಕಾಮಗಾರಿಗಳು ಅಪೂರ್ಣಗೊಂಡಿವೆ. ಜನರೆಡೆಗೆ ತಲುಪುವಲ್ಲಿ ವಿಫಲವಾಗಿದೆ ಎಂಬುದು ಬಹುದೊಡ್ಡ ಆರೋಪವಾಗಿದೆ. ಈ ಬಗ್ಗೆ ಕೂಲಂಕಷ ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಹಾಡಿ ಮತ್ತು ಕಾಲೋನಿಗಳ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ನಬಾರ್ಡ್ ಮತ್ತು ಎನ್ಡಿಆರ್ಎಫ್ ಅನುದಾನದಲ್ಲಿ ಕಾಮಗಾರಿ ನಡೆಸಲಾಗುವುದು.
ರಾಜ್ಯದಲ್ಲಿ ಉತ್ತಮ ಆಡಳಿತ ಕಾಣಿಸುತ್ತಿಲ್ಲ. ಪ್ರಗತಿ ಕಂಡ ರಾಜ್ಯ ಎಂದು ಗುರುತಿಸಿಕೊಂಡರೂ ಇತ್ತೀಚಿನ ಬೆಳವಣಿಗೆಯಲ್ಲಿ ಶೂನ್ಯ ಸಾಧನೆಯೆಡೆಗೆ ಸಾಗುತ್ತಿದೆ. ಜಾತಿಗಣತಿ ಸಮೀಕ್ಷೆ ನಡೆಸಿದರೂ ಬಹಿರಂಗ ಪಡಿಸಿಲ್ಲ. ಜಾತಿಗಣತಿಗೆ ೧೬೯ ಕೋಟಿ ಹಣ ಬಳಕೆಯಾಗಿದೆ. ಈ ಬಗ್ಗೆ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಜನರ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಅದನ್ನು ಫಲಾನುಭವಿಗಳೆಡೆಗೆ ತಲುಪಿಸುವ ಕಾರ್ಯ ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಬೇಕು ಎಂದರು.
ರಾಜ್ಯ ಸರ್ಕಾರದ ಹಗರಣಗಳನ್ನು ನಾವುಗಳು ಬಯಲಿಗೆ ತರಬೇಕಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರುಗಳೇ ಅದನ್ನು ಬಹಿರಂಗಪಡಿಸುತ್ತಿದ್ದಾರೆ.
ಬಿಜೆಪಿ ಸರ್ಕಾರದ ಆಡಳಿತ ಬರಬೇಕು. ಭ್ರಷ್ಟ ಆಡಳಿತ ಕಳಚಿ ಉತ್ತಮ ಆಡಳಿತ ರಾಜ್ಯದಲ್ಲಿ ಕಾಣಬೇಕು ಎಂಬ ಆಶಯ ನಮ್ಮದಾಗಬೇಕು ಎಂದು ಹೇಳಿದರು.
ಶಕ್ತಿ ಕೇಂದ್ರದ ಪ್ರಮುಖ್, ಮಂಜು ಸುರೇಶ್ ರೈ, ರಾಜ್ಯ ಎಸ್.ಟಿ ಮೋರ್ಚಾ ಉಪಾಧ್ಯಕ್ಷ, ಶ್ರೀನಿವಾಸ್, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ರಾಜ್ಯ ಕೃಷಿ ಮೋರ್ಚಾ ಸದಸ್ಯೆ ಯಮುನಾ ಚಂಗಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ತಾಲ್ಲೂಕು ಮಂಡಲ ಅಧ್ಯಕ್ಷ ಸುವಿನ್ ಗಣಪತಿ, ಉಪಾಧ್ಯಕ್ಷ ಕಿಲನ್ ಗಣಪತಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್, ಮಹೇಶ್ ಜೈನಿ, ಅರುಣ್ ಭೀಮಯ್ಯ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ತಾಲೂಕು ಮಂಡಲ ಕಾರ್ಯದರ್ಶಿ ಅಜೀತ್ ಕರುಂಬಯ್ಯ, ಮುದ್ದಿಯಡ ಮಂಜು ಗಣಪತಿ, ಪ್ರಮುಖರುಗಳಾದ ಪಡಿಕಲ್ ಯದು ಇದ್ದರು.