ವೀರಾಜಪೇಟೆ, ಜು. ೫ : ತಾಯಿಯನ್ನು ಹತ್ಯೆ ಮಾಡಿ ಶವವನ್ನು ಬಾವಿಗೆ ಎಸೆದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಮಗನಿಗೆ ವೀರಾಜಪೇಟೆ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ರೂ. ೫೦ ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ವೀರಾಜಪೇಟೆ ತಾಲೂಕು ಕೊಳ್ತೋಡು ಬೈಗೋಡು ಗ್ರಾಮದ ನಿವಾಸಿ ಎಂ.ಬಿ. ಕಾರ್ಯಪ್ಪ ಅವರ ಪುತ್ರ ಎಂ.ಕೆ. ದೇವಯ್ಯ (೫೩) ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಕೊಳ್ತೋಡು ಬೈಗೋಡು ನಿವಾಸಿ ದಿ. ಎಂ.ಬಿ ಕಾರ್ಯಪ್ಪ ಮತ್ತು ಕಾಮವ್ವ (ಕಾಮಿ) ದಂಪತಿಯ ಮೂವರು ಮಕ್ಕಳ ಪೈಕಿ ದೇವಯ್ಯ ಮತ್ತು ೮೩ ವರ್ಷ ಪ್ರಾಯದ ತಾಯಿ ಕಾಮವ್ವ ಒಂದೇ ಮನೆಯಲ್ಲಿ ವಾಸವಿದ್ದರು. ತಾಯಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ತಾ. ೨-೧೨-೨೦೨೦ ರಂದು ರಾತ್ರಿ ಊಟ ಮುಗಿಸಿ ಮಲಗಿದ್ದ ಕಾಮವ್ವ ಬೆಳಿಗ್ಗೆ ಮನೆಯಲ್ಲಿ ಇಲ್ಲದೆ ಕಾಣೆಯಾಗಿದ್ದಾರೆ ಎಂದು ತೋಟದ ಎಲ್ಲೆಡೆ ಹುಡುಕಾಟ ನಡೆಸಿ ಕೊನೆಯಲ್ಲಿ ಮನೆಯ ಆವರಣದಲ್ಲಿದ್ದ ತೆರೆದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮಗ ದೇವಯ್ಯ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಶವ ಪರೀಕ್ಷೆಗೆ ಒಳಪಡಿಸಿದ ವೇಳೆಯಲ್ಲಿ ಮೃತರ ಮಗಳು ವಿಮಲ ಪ್ರಕರಣದಲ್ಲಿ ಸಂಶಯವಿದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡುತ್ತಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ನಂತರ ವೀರಾಜಪೇಟೆ ವೃತ್ತ ನಿರೀಕ್ಷಕÀ ಶ್ರೀಧರ್ ಬಿ.ಎಸ್ ಅವರು ಹೆಚ್ಚುವರಿ ತನಿಖೆ ನಡೆಸಿದಾಗ ಮರಣೋತ್ತರ ಪರೀಕ್ಷೆಯಲ್ಲಿ ಮೃತದೇಹದಲ್ಲಿ ದೊರಕಿರುವ ನೀರು ಮತ್ತು ಬಾವಿಯಲ್ಲಿರುವ ನೀರು ಹೊಂದಾಣಿಕೆಯಾಗುವುದಿಲ್ಲವೆAದು ದೃಢವಾಗುತ್ತದೆ. ಕಾಮವ್ವ ಅವರನ್ನು ಕೊಲೆ ಮಾಡಿ ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಮೃತದೇಹವನ್ನು ಬಾವಿಗೆ ಹಾಕಿರುವುದು ತನಿಖೆಯಿಂದ ಧೃಡವಾಗುತ್ತದೆ. ಕೊಲೆ ಮಾಡಿ ಸಾಕ್ಷಾಧಾರಗಳನ್ನು ನಾಶ ಮಾಡಿರುವುದರ ವಿರುದ್ಧ ಮರು ಪ್ರಕರಣ ದಾಖಲಿಸಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಾರೆ.
ಸತತ ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯವು ತಾ.೨ ರಂದು ಅಂತಿಮ ತೀರ್ಪು ಪ್ರಕಟಿಸಿದೆ. ಕೊಲೆ ಆರೋಪ ಸಾಭೀತಾದ ಹಿನ್ನೆಲೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ನಟರಾಜು ಅವರು ಎಂ.ಕೆ. ದೇವಯ್ಯನಿಗೆ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. ೫೦ ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ೬ ತಿಂಗಳ ಹೆಚ್ಚುವರಿ ಕಾರಾಗೃಹ ವಾಸ, ಸಾಕ್ಷಿ ನಾಶಪಡಿಸಲು ಪ್ರಯತ್ನಿಸಿದ್ದಕ್ಕಾಗಿ ೩ ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ. ೨೦ ಸಾವಿರ ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ೩ ತಿಂಗಳ ಕಾಲ ಹೆಚ್ಚುವರಿ ಕಾರಾಗೃಹ ವಾಸ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರಕಾರಿ ಅಭಿಯೋಜಕ ಯಾಸಿನ್ ಅಹಮ್ಮದ್ ವಾದ ಮಂಡಿಸಿದರು.
-ಕಿಶೋರ್‌ಕುಮಾರ್ ಶೆಟ್ಟಿ