ಸಿದ್ದಾಪುರ, ಜು. ೫ : ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿಗೆ ಗುರುತಿಸಿರುವ ಜಾಗ ಕಾಡು ಪಾಲಾಗಿದೆ. ಪುನರ್ವಸತಿ ಕಲ್ಪಿಸಿ ಕೊಡಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷö್ಯತನದಿಂದಾಗಿ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಘಟನೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ನಡೆದಿರುತ್ತದೆ. ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದ ಕಾಡು ಹಾಗೂ ಕುಂಬಾರ ಗುಂಡಿ ಭಾಗದ ಕಾವೇರಿ ನದಿ ದಡದಲ್ಲಿ ವಾಸಿಸುವ ನೂರಾರು ಕುಟುಂಬಗಳು ೨೦೧೯ರ ಮಹಾಮಳೆಗೆ ಪ್ರವಾಹಕ್ಕೆ ಸಿಲುಕಿ ತಮ್ಮ ಮನೆಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡರು. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ತಮಗೆ ಪುನರ್ವಸತಿ ಕಲ್ಪಿಸಿ ಕೊಡುವಂತೆ ಒತ್ತಾಯಿಸಿ ನೆಲ್ಲಿಹುದಿಕೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿದ್ದ ಪರಿಹಾರ ಕೇಂದ್ರದಲ್ಲಿ ಪ್ರತಿಭಟನೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಜಾಗ ಗುರುತಿಸುವಂತೆ ಕಂದಾಯ ಇಲಾಖೆಗೆೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ಸೋಮವಾರಪೇಟೆ ತಾಲೂಕು ಹಾಗೂ ಕುಶಾಲನಗರ ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳು ಸೇರಿ ಅರೆಕಾಡು ಬಳಿಯ ಅಭ್ಯತ್‌ಮಂಗಲ ಗ್ರಾಮಕ್ಕೆ ಸೇರಿದ ಎಂಟು ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿದಾರರಿಂದ ವಶಪಡಿಸಿಕೊಳ್ಳಲಾಯಿತು. ಆ ಜಾಗದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿಗೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಾಗವನ್ನು ಸಮತಟ್ಟು ಮಾಡಲಾಯಿತು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಸಂತ್ರಸ್ತರಿಗೆ ಟೋಕನ್‌ಗಳನ್ನು ವಿತರಿಸಲಾಯಿತು. ಆದರೆ ಪುನರ್ವಸತಿ ಗುರುತಿಸಿದ ಸ್ಥಳದಲ್ಲಿ ಜಿಲ್ಲಾಡಳಿತದ ವತಿಯಿಂದ ಈವರೆಗೂ ಯಾವುದೇ ಕಾಮಗಾರಿಗಳು ಮಾಡದೆ ಆರು ವರ್ಷಗಳು ಕಳೆದಿರುತ್ತದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಗುರುತಿಸಿರುವ ಜಾಗವು ಕಾಡು ಗಿಡಗಳು ಬೆಳೆದು ದಟ್ಟ ಕಾಡು ಆವರಿಸಿದೆ. ಸಂಬAಧಪಟ್ಟ ತಾಲೂಕು ಕಾರ್ಯ ನಿರ್ವಹಣಾ ಅಧಿಕಾರಿಗಳು ಕೂಡ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಯಾವುದೇ ಆಸಕ್ತಿ ವಹಿಸುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಈ ಹಿಂದೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಭರವಸೆಯನ್ನು ನೀಡಿದ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಇದೀಗ ಇತ್ತ ಸುಳಿಯುತ್ತಿಲ್ಲ ಎಂದು ಆರೋಪಗಳು ಕೇಳಿ ಬರುತ್ತಿದೆ. ಮನೆ ಕಳೆದುಕೊಂಡು ನದಿ ತೀರದಲ್ಲಿ ವಾಸ ಮಾಡುತ್ತಿರುವ ಸಂತ್ರಸ್ತರು ಪ್ಲಾಸ್ಟಿಕ್ ಗುಡಿಸಿಲಿನಲ್ಲಿ ಹಾಗೂ ಶೆಡ್‌ಗಳಲ್ಲಿ ತಮ್ಮ ಸಂಸಾರದೊAದಿಗೆ ವಾಸ ಮಾಡಿಕೊಂಡಿದ್ದಾರೆ. ಸಂತ್ರಸ್ತರ ಸಂಕಟದ ಬದುಕನ್ನು ಕೇಳುವವರು ಇಲ್ಲವೆಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಒತ್ತುವರಿದಾರರಿಂದ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದುಕೊಂಡ ಜಿಲ್ಲಾಡಳಿತ ಕೂಡ ಪುನರ್ವಸತಿ ನಿರ್ಮಾಣದ ಬಗ್ಗೆ ಯಾವುದೇ ಆಸಕ್ತಿ ತೋರದೆ ದಿನ ದೂಡುತ್ತಿದೆ. ಜನಪ್ರತಿನಿಧಿಗಳು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಭರವಸೆಗಳನ್ನು ನೀಡಿ ತದನಂತರ ರಾಜಕೀಯದಲ್ಲಿ ಕಾಲಹರಣ ಮಾಡುತ್ತಾ ನಂತರ ಮರೆಯುತ್ತಿದ್ದಾರೆ ಇದರಿಂದಾಗಿ ಸಂತ್ರಸ್ತರಿಗೆ ಪುನರ್ವಸತಿ ಮರೀಚಿಕೆಯಾಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಕಿರು ಸೇತು ನಿರ್ಮಾಣ

ನೆಲ್ಲಿಹುದಿಕೇರಿ ನದಿ ತೀರದ ನಿವಾಸಿಗಳಿಗೆ ಪುನರ್ವಸತಿಗೆ ಗುರುತಿಸಿರುವ ಜಾಗಕ್ಕೆ ತೆರಳುವ ರಸ್ತೆ ಬದಿಯಲ್ಲಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಅನುದಾನದಿಂದ ಕಿರು ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಆ ಜಾಗದಲ್ಲಿ ಪುನರ್ವಸತಿಗೆ ಸಂಬAಧಿಸಿದ

(ಮೊದಲ ಪುಟದಿಂದ) ಯಾವುದೇ ಕಾಮಗಾರಿಗಳು ನಡೆಯದಿರುವುದು ತಾಲೂಕು ಪಂಚಾಯಿತಿಯ ದಿವ್ಯ ನಿರ್ಲಕ್ಷವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತ್ರಸ್ತರಿಗೆ ಪುನರ್ವಸತಿ ಮರೀಚಿಕೆಯಾಗಿದೆ. ೨೦೧೯ರಲ್ಲಿ ಪ್ರವಾಹಕ್ಕೆ ಸಿಲುಕಿ ನದಿ ತೀರದ ೫೦ಕ್ಕೂ ಅಧಿಕ ಮನೆಗಳು ನೆಲಸಮಗೊಂಡಿತು. ೭೦ಕ್ಕೂ ಅಧಿಕ ಮನೆಗಳು ಬಿರುಕು ಬಿಟ್ಟಿದ್ದು. ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಕೆಲವು ತಿಂಗಳುಗಳ ಕಾಲ ಆಸರೆ ಪಡೆದರು. ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಸರೆ ಪಡೆದ ಬಳಿಕ ತಮ್ಮ ಮನೆಗಳಿಗೆ ತೆರಳಿದರು. ಕುಸಿದು ಹೋಗಿದ್ದ ಮನೆಯ ಬಳಿ ಪ್ಲಾಸ್ಟಿಕ್ ಹೊದಿಕೆಗಳಿಂದ ಗುಡಿಸಲು ನಿರ್ಮಿಸಿಕೊಂಡರು. ವರ್ಷಂಪ್ರತಿ ಪ್ರವಾಹದ ಸಂದರ್ಭದಲ್ಲಿ ಕರಡಿಗೋಡು ಗುಹ್ಯ ಗ್ರಾಮದ ನದಿ ತೀರದ ಬಳಿ ಆತಂಕ ಸೃಷ್ಟಿಸುತ್ತಿದೆ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳು ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಜೀವನ ಸಾಗಿಸುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬಹುತೇಕ ಮನೆಗಳು ಜಲಾವೃತಗೊಳ್ಳುತ್ತವೆ. ಪ್ರವಾಹ ಸಂದರ್ಭದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸುತ್ತಾರೆ. ನಂತರ ಭರವಸೆಗಳನ್ನು ನೀಡಿ ತೆರಳುತ್ತಾರೆ. ಪರಿಹಾರ ಕೇಂದ್ರಗಳಿಗೆ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಇದ್ದ ಸಂದರ್ಭದಲ್ಲಿ ಅಂದಿನ ಸಚಿವರು ಪುನರ್‌ವಸತಿ ಕಲ್ಪಿಸಿ ಕೊಡುವುದಾಗಿ ವೀರಾಜಪೇಟೆ ತಾಲೂಕು ಬಿಟ್ಟಂಗಾಲದ. ಬಿ. ಶೆಟ್ಟಿಗೇರಿ ಎಂಬಲ್ಲಿ ೧೦ ಎಕರೆ ಒತ್ತುವರಿ ಭೂಮಿಯನ್ನು ಜಿಲ್ಲಾಡಳಿತ ವಶÀಪಡಿಸಿಕೊಂಡಿತು. ನಂತರ ಆ ಜಾಗದಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಯಿತು. ಆದರೆ ಸಂತ್ರಸ್ತರು ತಮಗೆ ಸಿದ್ದಾಪುರ ವ್ಯಾಪ್ತಿಯಲ್ಲಿ ನಿವೇಶನವನ್ನು ನೀಡಬೇಕೆಂದು ಒತ್ತಾಯಿಸಿದರು. ಬಿ. ಶೆಟ್ಟಿಗೇರಿ ದೂರವಾಗಿದ್ದು ಅಲ್ಲಿ ಕೂಲಿ ಕೆಲಸಗಳು ಕಡಿಮೆ ಇದ್ದು ಆ ಭಾಗದಲ್ಲಿ ಪುನರ್ವಸತಿಯು ಬೇಡವೆಂದರು. ಇದಾದ ನಂತರ ನದಿ ತೀರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸಿ ಸಂತ್ರಸ್ತರ ಹೋರಾಟ ಸಮಿತಿಯ ಮೂಲಕ ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಬೃಹತ್ ಹೋರಾಟ ಮಾಡಲಾಯಿತು. ಆದರೆ ಈವರೆಗೂ ಸಿದ್ದಾಪುರ ಸಂತ್ರಸ್ತರಿಗೆ ಶಾಶ್ವತ ಸೂರು ಲಭಿಸಿರುವುದಿಲ್ಲ. ನದಿ ತೀರದ ಬಹುತೇಕ ಮನೆಗಳು ಬಿರುಕು ಬಿಟ್ಟು ಕುಸಿವ ಹಂತದಲ್ಲಿದೆ. ನದಿ ತೀರದ ನಿವಾಸಿಗಳು ಮಳೆಗಾಲದಲ್ಲಿ ಭಯದಿಂದಲೇ ದಿನ ದೂಡುವಂತಾಗಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಮಾಲ್ದಾರೆಯಲ್ಲಿ ಪುನರ್ವಸತಿಗೆ ಜಾಗ ಗುರುತು

ಕಳೆದ ವರ್ಷ ಪ್ರವಾಹದ ಸಂದರ್ಭದಲ್ಲಿ ನದಿ ತೀರದ ನಿವಾಸಿಗಳು ಪರಿಹಾರ ಕೇಂದ್ರದಲ್ಲಿ ತಾತ್ಕಾಲಿಕ ಆಶ್ರಯ ಪಡೆದರು. ವರ್ಷಂಪ್ರತಿ ಮಳೆಗಾಲ ಸಂದರ್ಭದಲ್ಲಿ ನದಿ ತೀರದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುವ ಹಿನ್ನೆಲೆಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣನವರು ಹೆಚ್ಚಿನ ಆಸಕ್ತಿ ವಹಿಸಿ ಹಿಂದಿನ ತಾಲೂಕು ತಹಶೀಲ್ದಾರ್ ರಾಮಚಂದ್ರ ಅವರಿಗೆ ಸೂಚನೆ ನೀಡಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಜಾಗ ಗುರುತಿಸುವಂತೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಇದೀಗ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೦ ಎಕರೆ ಜಾಗವನ್ನು ಪುನರ್ವಸತಿಗೆ ಗುರುತಿಸಲಾಗಿದೆ. ಈ ಜಾಗದ ಸಂಬAಧÀ ಸರ್ಕಾರದ ಮಟ್ಟದಲ್ಲಿ ಶಾಸಕರು ಪ್ರಕ್ರಿಯೆಯನ್ನು ಪ್ರಾರಂಭಿಸಿ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಶ್ರಮವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ತೀರದ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಶಾಸಕ ಪೊನ್ನಣ್ಣ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಂತ್ರಸ್ತರಿಗೆ ಶಾಶ್ವತ ಸೂರು ಸಿಗಬಹುದೆಂದು ನಿರೀಕ್ಷೆಯಲ್ಲಿ ಸಂತ್ರಸ್ತರು ದಿನ ನೋಡುತ್ತಿದ್ದಾರೆ.

ವಾಸು ಆಚಾರ್ಯ