ಸೋಮವಾರಪೇಟೆ, ಜು. ೫: ಕಳೆದ ೨೦೧೮ರಲ್ಲಿ ಸ್ವಂತ ಹಣದಿಂದ ಹೂಳು ತೆಗೆಯುವ ಮೂಲಕ ಕೆರೆಗಳಿಗೆ ಜೀವಕಳೆ ನೀಡಿದ ಉದ್ಯಮಿಗಳು ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು, ಭರ್ತಿಯಾಗಿರುವ ಯಡೂರು ದೇವರ ಕೆರೆ ಹಾಗೂ ಪಟ್ಟಣದ ಆನೆಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಈ ಹಿಂದೆ ನೀರಿನಲ್ಲದೇ ಬರಡಾಗಿದ್ದ ಯಡೂರು ದೇವರ ಕೆರೆ, ಹನಿ ನೀರೂ ಇಲ್ಲವಾಗಿದ್ದ ಪಟ್ಟಣದ ಆನೆಕೆರೆಯನ್ನು ಸುಮಾರು ೧೪ ಲಕ್ಷಕ್ಕೂ ಅಧಿಕ ಹಣ ವ್ಯಯಿಸಿ ಸಂಪೂರ್ಣವಾಗಿ ಹೂಳು ತೆಗೆಸಿದ್ದರು. ಇದರಿಂದಾಗಿ ಎರಡೂ ಕೆರೆಗಳಿಗೆ ಮತ್ತೆ ಜೀವ ಕಳೆ ಬಂದಿದ್ದು, ಅಲ್ಲಿಂದ ಪ್ರತೀ ವರ್ಷದ ಮಳೆಗಾಲದಲ್ಲಿ ತುಂಬಿ ಕೋಡಿ ಹರಿಯುತ್ತಿದೆ. ಬೇಸಿಗೆಯಲ್ಲಿ ಬರಡಾಗುತ್ತಿದ್ದ ಈ ಎರಡೂ ಕೆರೆಗಳು ೨೦೧೮ ರಿಂದ ಬಿರು ಬೇಸಿಗೆಯಲ್ಲೂ ನೀರಿನ ಸಂಗ್ರಹ ಇಟ್ಟುಕೊಂಡು ಜನ ಜಾನುವಾರುಗಳಿಗೆ ಉಪಯೋಗಿಯಾಗುತ್ತಿವೆ. ಇದೀಗ ಮಳೆ ಹಿನ್ನೆಲೆ ತುಂಬಿರುವ ಎರಡೂ ಕೆರೆಗಳಿಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರೂ ಆಗಿರುವ ಹರಪಳ್ಳಿ ರವೀಂದ್ರ ಅವರು ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
ಯಡೂರು ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕ ಸರ್ವೇಶ್ ಭಟ್ ಅವರ ಪೌರೋಹಿತ್ವದಲ್ಲಿ ಗಂಗಾಪೂಜೆ, ಮಹಾಮಂಗಳಾರತಿ ಸೇತಿದಂತೆ ವಿಶೇಷ ಪೂಜೆಗಳು ನಡೆದವು. ಈ ಸಂದರ್ಭ ಯಡೂರು ಗ್ರಾಮಾಧ್ಯಕ್ಷ ವೈ.ಡಿ. ಮೋಹನ್‌ಕುಮಾರ್, ಗ್ರಾ.ಪಂ. ಸದಸ್ಯ ಯಡೂರು ರಘು, ಮಾಜಿ ಅಧ್ಯಕ್ಷ ಎ.ಈ. ಮಲ್ಲಪ್ಪ, ವೈ.ಈ. ವಿಜಯ್‌ಕುಮಾರ್, ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್, ಹೆಚ್.ಬಿ. ರಾಜಪ್ಪ, ಮೊಗೇರ ಸಮಾಜದ ಪ್ರಮುಖರಾದ ದಾಮೋಧರ್, ಆಟೋ ಚಾಲಕರ ಸಂಘದ ಮಾಜೀ ಅಧ್ಯಕ್ಷ ಮೋಹನ್, ನಗರಳ್ಳಿ ಬಸಪ್ಪ, ದೀಪು ಸೇರಿದಂತೆ ಇತರರು ಇದ್ದರು.