ಗೋಣಿಕೊಪ್ಪಲು, ಜು. ೫ : ಕೆಲ ದಿನಗಳ ಹಿಂದೆ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂಧಲೆಯಿAದಾಗಿ ಸ್ಥಳೀಯ ರೈತರ, ಬೆಳೆಗಾರರ ಕಾಫಿ, ಕರಿಮೆಣಸು, ತೆಂಗು, ಅಡಿಕೆ, ಬಾಳೆ ಹಾಗೂ ಕಾಫಿ ಗಿಡಗಳನ್ನು ಕಿತ್ತು ನಷ್ಟ ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೊಲ್ಲೀರ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ಹಾಗೂ ಮಾಕುಟ್ಟ ವಲಯ ಅರಣ್ಯ ಅಧಿಕಾರಿಗಳ ಸಭೆ ಆಯೋಜಿಸುವ ಮೂಲಕ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ಕಾಡಾನೆಗಳ ಉಪಟಳಕ್ಕೆ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗ್ರಾಮಸ್ಥರು ಹಲವು ಸಲಹೆಗಳನ್ನು ನೀಡಿದರು. ಕಾಡಾನೆಗಳ ಸಮಸ್ಯೆಯಿಂದಾಗಿ ರೈತರು ಹಾಗೂ ಬೆಳೆಗಾರರು ನಿರಂತರ ಬೆಳೆ ನಷ್ಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಲಹೆ ನೀಡಲಾಯಿತು. ಗ್ರಾಮ ಪಂಚಾಯಿತಿಯಲ್ಲಿಯೇ ಬೆಳೆ ನಷ್ಟಗೊಂಡ ಬಗ್ಗೆ ರೈತರಿಂದ ಅರ್ಜಿ ಸ್ವೀಕರಿಸಲು ನಿರ್ಣಯ ಕೈಗೊಳ್ಳಲಾಯಿತು.

ಅರಣ್ಯಾಧಿಕಾರಿಗಳು ಪಂಚಾಯಿತಿಗೆ ಆಗಮಿಸಿ ಅರ್ಜಿ ನೀಡಬಹುದು ಎಂದು ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಶಂಕರ್, ಮಾಕುಟ್ಟ ವಲಯಾರಣ್ಯಾಧಿಕಾರಿ ಕಿರಣ್ ಆಚಾರ್ಯ ಸಭೆಗೆ ಮಾಹಿತಿ ಒದಗಿಸಿದರು. ವನ್ಯ ಪ್ರಾಣಿಗಳಿಂದ ನಷ್ಟಗೊಂಡ ಪರಿಹಾರ ಹಣವನ್ನು ಮೇ ತಿಂಗಳ ಅಂತ್ಯದವರೆಗೆ ಈಗಾಗಲೇ ರೈತರಿಗೆ ನೀಡಲಾಗಿದೆ. ಇನ್ನುಳಿದ ಅರ್ಜಿಗಳನ್ನು ಆದಷ್ಟು ಬೇಗನೇ ವಿಲೇವಾರಿ ಮಾಡುವ ಮೂಲಕ ರೈತರಿಗೆ ಇಲಾಖೆ ವತಿಯಿಂದ ಸಿಗುವ ಪರಿಹಾರ ನೀಡುವುದಾಗಿ ಅಧಿಕಾರಿಗಳು ವಿವರ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಬೋಪಣ್ಣ ಮಾತನಾಡಿ, ಈ ಭಾಗದಲ್ಲಿ ಪ್ರಸ್ತುತ ವರ್ಷದಲ್ಲಿ ಕಾಡಾನೆಗಳ ಹಾವಳಿ ಅಧಿಕವಾಗಿದೆ. ಇದರಿಂದ ಜನರು ಕಷ್ಟದಲ್ಲಿ ಸಿಲುಕಿದ್ದಾರೆ. ಸಣ್ಣ ಸಣ್ಣ ರೈತರು ಬಹಳಷ್ಟು ನೊಂದಿದ್ದಾರೆ. ಕಾಡಾನೆಯಿಂದ ಬೆಳೆ ನಷ್ಟಗೊಂಡು ತೋಟಕ್ಕೆ ಹೋಗುವುದನ್ನೇ ಬಿಟ್ಟಿದ್ದಾರೆ. ನಷ್ಟ ಪರಿಹಾರ ಗರಿಷ್ಠ ಪ್ರಮಾಣದಲ್ಲಿ ನೀಡಬೇಕು. ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.

ಈ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರವನ್ನು ಇಲಾಖೆಗೆ ನೀಡಲಾಗುತ್ತದೆ. ಗ್ರಾಮಸ್ಥರು ದೂರವಾಣಿ ಮೂಲಕ ಸಮಸ್ಯೆಯನ್ನು ತೋಡಿಕೊಂಡಾಗ ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು. ಪೊನ್ನಂಪೇಟೆ ಹಾಗೂ ಮಾಕುಟ್ಟ ವಲಯಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು. ಇದರಿಂದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬಹುದು. ಪರಸ್ಪರ ಹೊಂದಾಣಿಕೆ ಮೂಲಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವಂತೆ ಮನವಿ ಮಾಡಿದರು.

ಈಗಾಗಲೇ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೆಚ್ಚುವರಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಅನುದಾನದ ಸದ್ಬಳಕೆ ಮಾಡಿಕೊಂಡು ಕಾಡಾನೆ ಹಾವಳಿಯನ್ನು ನಿಯಂತ್ರಿಸುವAತೆ ತಿಳಿಸಿದರ. ಅಧಿಕಾರಿಗಳಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಕಾಡಾನೆಯಿಂದ ನಷ್ಟಗೊಂಡ ಬಗ್ಗೆ ಪರಿಹಾರಕ್ಕಾಗಿ ಅರ್ಜಿಗಳನ್ನು ನೀಡಿದರು. ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಶ್ರೀಧರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. -ಹೆಚ್.ಕೆ.ಜಗದೀಶ್