ಸಿದ್ದಾಪುರ, ಜು. ೫: ರೇಡಿಯೋ ಕಾಲರ್ ಅಳವಡಿಸಲ್ಪಟ್ಟಿರುವ ದಕ್ಷ ಕಾಡಾನೆಯು ಶುಕ್ರವಾರ ರಾತ್ರಿ ಬಾಡಗ ಬಾಣಂಗಾಲ ಗ್ರಾಮದ ಮಠದ ನಿವಾಸಿ ಕೆ.ಬಿ. ಸದಾಶಿವ ಎಂಬವರ ತೋಟದ ಕಬ್ಬಿಣದ ಗೇಟಿನ ಮೇಲೆ ದಾಳಿ ನಡೆಸಿದೆ. ಗೇಟಿನ ಕಂಬಿಗಳನ್ನು ಹಾನಿಗೊಳಿಸಿದೆ. ಅಲ್ಲದೆ ತೋಟದ ಲೈನ್ ಮನೆಗಳ ಸುತ್ತಲೂ ಹಾಗೂ ಕಾಫಿ ತೋಟದೊಳಗೆ ನುಗ್ಗಿ ದಾಂಧಲೆ ನಡೆಸಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಇದೀಗ ದಕ್ಷ ಕಾಡಾನೆಯ ಉಪಟಳದಿಂದಾಗಿ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದಂತಾಗಿದೆ. ಇತ್ತೀಚೆಗೆ ಈ ಭಾಗದಲ್ಲಿ ಹುಲಿ ಜಾನುವಾರುವಿನ ಮೇಲೆ ದಾಳಿ ನಡೆಸಿ ಕೊಂದುಹಾಕಿದ ಘಟನೆ ಕೂಡ ನಡೆದಿತ್ತು. ಹಾನಿ ಗೊಳಗಾದ ಗೇಟ್ ಅನ್ನು ತಿತಿಮತಿ ವಲಯ ಉಪ ವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಕಾಫಿ ತೋಟದ ಮಾಲೀಕ ಸದಾಶಿವ ಹಾಜರಿದ್ದರು.