ಮಡಿಕೇರಿ, ಜು. ೫: ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪನವರ ಸ್ಥಾನ ಭದ್ರಗೊಂಡಿದೆ. ಶುಕ್ರವಾರ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸೂಚನೆಯಂತೆ ಕೆಪಿಸಿಸಿ ರಾಜ್ಯದ ೨೧ ಜಿಲ್ಲೆಗಳ ಒಂದು ಅಥವಾ ಒಂದಕ್ಕಿAತ ಹೆಚ್ಚು ಅವಧಿ ಪೂರ್ಣಗೊಳಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ವೀಕ್ಷಕರನ್ನು ನೇಮಿಸಿ ಆದೇಶ ಹೊರಡಿಸಲಾಗಿತ್ತು. ಈ ಆದೇಶದಲ್ಲಿ ಕೊಡಗು ಜಿಲ್ಲೆಯ ಹೆಸರು ಉಲ್ಲೇಖಿಸಿರಲಿಲ್ಲ.

೨೦೨೨ರ ನವೆಂಬರ್ ೨೪ ರಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ತೀತಿರ ಧರ್ಮಜ ಉತ್ತಪ್ಪ ಅವರನ್ನು ನೇಮಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದರು. ಆದರೆ ಧರ್ಮಜ ಅಧ್ಯಕ್ಷರಾಗಿ ನೇಮಕಗೊಂಡ ಅವಧಿಯಲ್ಲಿಯೇ ಅಧ್ಯಕ್ಷರಾಗಿ ನೇಮಕಗೊಂಡಿದ್ದ ತುಮಕೂರು ಹಾಗೂ ಹಾಸನ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ವೀಕ್ಷಕರನ್ನು ನೇಮಿಸಲಾಗಿದೆ.

ಧರ್ಮಜ ಅವರು ೨೦೨೫ರ ನವೆಂಬರ್ ೨೪ಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮೂರು ವರ್ಷ ಪೂರ್ಣಗೊಳ್ಳಲಿದೆ. ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗುವ ಮೊದಲು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ.ಕೆ ಮಂಜುನಾಥ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕೆಪಿಸಿಸಿ ಧರ್ಮಜ ಉತ್ತಪ್ಪನವರನ್ನು ಕಾರ್ಯಾಧ್ಯಕ್ಷರಾಗಿ ೨೬-೦೫-೨೦೨೧ರಲ್ಲಿ ನೇಮಕ ಮಾಡಲಾಗಿತ್ತು.

ಆಕಾಂಕ್ಷಿಗಳೇ ಇಲ್ಲ!

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೊಡಗಿನಲ್ಲಿ ಪ್ರತೀ ಬಾರಿ ಲಾಬಿ, ಪೈಪೋಟಿ ನಡೆಯುತ್ತಿದ್ದು ಮಾಮೂಲಿಯಾಗಿತ್ತು. ಗುಂಪುಗಾರಿಕೆ, ಬಣಗಳಿಂದ ಕೂಡಿದ್ದ ಕಾಂಗ್ರೆಸ್ ಪಕ್ಷದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಂಡರೆ ಶಾಸಕರಿಗಿಂತ ಪವರ್ ಎಂಬ ಮಾತಿತ್ತು. ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ ಬಳಿಕ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಬದಲಾಗಿದೆ.

ಪ್ರತೀ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಮೂರ್ನಾಲ್ಕು ಆಕಾಂಕ್ಷಿಗಳು ಇರುತ್ತಿದ್ದರು. ಆದರೆ ಇದೀಗ ಎಲ್ಲವೂ ಬದಲಾಗಿದೆ. ಕೊಡಗು ಜಿಲ್ಲಾ ಕಾಂಗ್ರೆಸ್‌ನಲ್ಲಿ ಇದೀಗ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳೆAದು ಹೇಳಿಕೊಳ್ಳುವವರೇ ಇಲ್ಲದಾಗಿದೆ.

ಕೊಡಗು ಕಾಂಗ್ರೆಸ್‌ನಲ್ಲಿ ಶಾಸಕರಾದ ಎ.ಎಸ್ ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರನ್ನು ಮೀರಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟಸಾಧ್ಯ ಎಂಬಿತ್ಯಾದಿ ಕಾರಣಗಳಿಂದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳೇ ಇಲ್ಲದಂತಾಗಿದೆ ಎನ್ನಲಾಗಿದೆ.

ವಿಶೇಷವನೇಂದರೆ ತೀತಿರ ಧರ್ಮಜ ಉತ್ತಪ್ಪ ಅದೃಷ್ಟವಂತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂಬ ಮಾತು ಕಾಂಗ್ರೆಸ್‌ನಲ್ಲಿದೆ. ಅವರು ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಕೊಡಗಿನಲ್ಲಿ ಕಾಂಗ್ರೆಸ್ ಶಾಸಕರು ಎರಡು ದಶಕಗಳ ಬಳಿಕ ಗೆಲುವು ಸಾಧಿಸಿದ್ದಾರೆ.

ಅದಲ್ಲದೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಧರ್ಮಜ ಉತ್ತಪ್ಪನವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ಲಭ್ಯವಾಗಿದೆ. ಆದರೆ ಶಾಸಕರುಗಳನ್ನು ಮೀರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪನವರಿಗೆ ಯಾವುದೇ ತೀರ್ಮಾನಗಳನ್ನು ಪಕ್ಷದಲ್ಲಿ ತೆಗೆದುಕೊಳ್ಳುವುದು ಕಷ್ಟಸಾಧ್ಯ ಎಂಬ ಮಾತು ಕೂಡ ಕಾಂಗ್ರೆಸ್ ವಲಯದಲ್ಲಿ ಇದೆ.

ವೀರಾಜಪೇಟೆಗೆ ಸೀಮಿತಗೊಂಡ ಅಧ್ಯಕ್ಷ!

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪನವರು ಇತ್ತೀಚಿನ ದಿನಗಳಲ್ಲಿ ವೀರಾಜಪೇಟೆ ಕ್ಷೇತ್ರಕ್ಕೆ ಸೀಮಿತಗೊಂಡಿದ್ದಾರೆ ಎಂಬ ಮಾತುಗಳು ಕಳೆದ ಎರಡ್ಮೂರು ತಿಂಗಳುಗಳಿAದ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮದಲ್ಲಿ ಧರ್ಮಜ ಅವರು ಭಾಗವಹಿಸುತ್ತಿರುವುದು ತೀರಾ ವಿರಳವಾಗಿದೆ. ಜಿಲ್ಲಾ ಕೇಂದ್ರದಲ್ಲಿ ಪಕ್ಷದ ಕಾರ್ಯಕ್ರಮ ಅಥವಾ ಉಸ್ತುವಾರಿ ಸಚಿವರ ಭೇಟಿ ಸಂದರ್ಭದಲ್ಲಿ ಮಾತ್ರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮಡಿಕೇರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರ ಎಲ್ಲಾ ಪ್ರವಾಸದ ಕಾರ್ಯಕ್ರಮದಲ್ಲಿ ಧರ್ಮಜ ಅವರು ಭಾಗವಹಿಸುತ್ತಿದ್ದಾರೆ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಕೂಡ ಧರ್ಮಜ ಉತ್ತಪ್ಪನವರಾಗಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸಲು ಧರ್ಮಜ ಅವರು ಆಸಕ್ತಿ ತೋರದೆ, ವೀರಾಜಪೇಟೆ ಮಾತ್ರ ಸೀಮಿತಗೊಂಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಇದೆ.

ಮತ್ತೊಂದೆಡೆ ಎಲ್ಲರನ್ನೂ ಸಮಾನವಾಗಿ ಕರೆದುಕೊಂಡು ಹೋಗುವ ಸಾಮರ್ಥ್ಯ ಹಾಗೂ ಎಲ್ಲಿಯೂ ಅಸಮಾಧಾನ ಬಾರದ ರೀತಿಯಲ್ಲಿ ಕೂಡ ಧರ್ಮಜ ಉತ್ತಪ್ಪನವರು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಕ್ಷೇತ್ರದಿಂದ ಸ್ಪರ್ಧಿಸಲು ಅವರು ಸಿದ್ಧತೆ ನಡೆಸುತ್ತಿದ್ದಾರೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ