ಮಡಿಕೇರಿ, ಜು. ೪: ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಕೆಳಭಾಗದ ಮೈದಾನದಲ್ಲಿರುವ ಕೊಡವ ಮಂದ್‌ನಲ್ಲಿ ನೂರಾರು ವರ್ಷಗಳಿಂದ ಆಸರೆಯಾಗಿದ್ದ ಬೃಹತ್ ಅತ್ತಿಮರ ತಾ. ೨ ರಂದು ಮಳೆಯ ನಡುವೆ ಮುರಿದು ಬಿದ್ದಿದೆ.

ಈ ಮರ ಕುಂಬಾಗಿದ್ದ ಪರಿಣಾಮ ಗಾಳಿ - ಮಳೆಗೆ ಅರ್ಧಭಾಗ ನೋಡ ನೋಡುತ್ತಿದ್ದಂತೆ ಧರಾಶಾಹಿಯಾಯಿತು. ಈ ದೃಶ್ಯವನ್ನು ಸನಿಹದ ರವಿ ಅವರು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ. ಮಂದ್‌ನ ಮಹತ್ವ ಅರಿತಿರುವವರು, ಈ ಮರದಡಿ ಆಶ್ರಯ - ನೆರಳು ಪಡೆದಿದ್ದ ಸನಿಹದ ಶಾಲಾ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಿಂದಿನ ನೆನಪಿನೊಂದಿಗೆ ಮರುಗಿದ್ದಾರೆ.

ನಿನ್ನೆ ಮಡಿಕೇರಿ ಕೊಡವ ಸಮಾಜದ ಮೂಲಕ ಬಿದ್ದಿದ್ದ ಮರದ ಭಾಗವನ್ನು ತೆರವುಗೊಳಿಸಿ ಮತ್ತೊಂದು ಕಡೆ ಅಪಾಯಕಾರಿಯಾಗಿದ್ದ ಮರದ ಭಾಗವನ್ನೂ ಜೆಸಿಬಿ ಮೂಲಕ ತೆರವು ಮಾಡಲಾಯಿತು. ಈ ಕೆಲಸ ಮುಗಿಸಿ ಮರಳಿದ ಕೆಲಹೊತ್ತಿನಲ್ಲೇ ಮರದ ಇನ್ನೊಂದು ಭಾಗವೂ ಮುರಿದುಬಿದ್ದಿದೆ. ಇದೀಗ ಈ ಮರವನ್ನು ಪೂರ್ಣವಾಗಿ ತೆರವು ಮಾಡಿಕೊಡುವಂತೆ ಕೊಡವ ಸಮಾಜದ ಮೂಲಕ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.

ಕೊಡವ ಮಂದ್‌ನಲ್ಲಿ ಯಾವುದೇ ಕಟ್ಟಡಗಳು ಇರುವುದಿಲ್ಲ. ಇಲ್ಲಿ ಮರವೇ ಪ್ರಾಧಾನ್ಯವಾಗಿರುತ್ತದೆ. ಇಲ್ಲಿರುವ ಮರದ ನೆರಳಿನಲ್ಲಿ ಕುಳಿತು ಅಥವಾ ಅಲ್ಲಿನ ಕಟ್ಟೆಯಲ್ಲಿಯೇ ಹಲವು ವಿಚಾರಗಳು ಈ ಹಿಂದಿನಿAದಲೂ ನಡೆದುಕೊಂಡು ಬರುತಿತ್ತು. ಇದು ಧಾರ್ಮಿಕ ನೆಲೆಗಟ್ಟಿನ ಸ್ಥಳವೂ ಹೌದು. ನ್ಯಾಯಪೀಠದ ಮಾದರಿಯೂ ಮಂದ್ ಕಾರ್ಯನಿರ್ವಹಿಸುತ್ತಿದ್ದುದು ಇತಿಹಾಸ.

ಸಾಂಸ್ಕೃತಿಕ - ಧಾರ್ಮಿಕ ಹಿನ್ನೆಲೆಯ ಕಲೆಗಳ ಅರಿವು - ಪ್ರದರ್ಶನ, ಸಮರಕಲೆ, ನ್ಯಾಯಪಂಚಾಯಿತಿಗಳಿಗೆ ಇದು ಸ್ಥಳ. ಆದರೆ ಪ್ರಸ್ತುತದ ಸನ್ನಿವೇಶದಲ್ಲಿ ಹಿಂದಿನ ಆಚರಣೆಗಳು ಸ್ವಲ್ಪಮಟ್ಟಿಗೆ ಮರೆಯಾದಂತಿದ್ದರೂ ಈಗೀಗ ಮರು ಕಳಿಸುತ್ತಿದೆ. ಮಂದ್‌ಗಳಲ್ಲಿ ಸಾಧಾರಣವಾಗಿ ಹಾಲುಸೂಸುವ ಮರಗಳನ್ನು ಮಾತ್ರ ಬೆಳೆಸಲಾಗುತ್ತದೆ. ಅರಳಿ - ಆಲದ ಮರ, ಅತ್ತಿಮರ, ಸಂಪಿಗೆ ಮರ, ಹಲಸಿನ ಮರ ಇಂತಹ ಮರಗಳು ಮಾತ್ರ ಮಂದ್‌ನಲ್ಲಿರುತ್ತದೆ. ಇದರ ಸುತ್ತವೇ ಸಾಂಸ್ಕೃತಿಕ ಕಲೆಗಳ ಪ್ರದರ್ಶನವೂ ಜರುಗುತ್ತವೆ.

ಇದೀಗ ನೂರಾರು ವರ್ಷಗಳ ಐತಿಹ್ಯದ ಈ ಮರ ಕಣ್ಮರೆಯಾಗಲಿದೆ. ಈ ಸ್ಥಳದಲ್ಲಿ ಮುಂದೆ ಅರಳಿ ಗಿಡವನ್ನು ನೆಟ್ಟು ಪೋಷಣೆ ಮಾಡಲಾಗುತ್ತದೆ ಎಂದು ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರು ಹೇಳಿದ್ದಾರೆ. ಕೊಡವ ಸಮಾಜ ಈ ಸ್ಥಳದಲ್ಲಿ ೩೦ ಸೆಂಟ್ ಜಾಗ ಹೊಂದಿದೆ. ಸುತ್ತಕಟ್ಟೆ ನಿರ್ಮಿಸಲಾಗಿದೆಯಾದರೂ ಒಂದು ಭಾಗವನ್ನು ಮಕ್ಕಳು ಆಟವಾಡಲು ಮುಕ್ತವಾಗಿರಿಸಲಾಗಿದೆ. ಈ ಮರ ಎಲ್ಲರಿಗೂ ನೆರಳು ನೀಡುತ್ತಿತ್ತು ಎಂದು ಅವರು ಹೇಳಿದ್ದಾರೆ.

ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಮಂದ್ ಧಾರ್ಮಿಕ ಹಿನ್ನೆಲೆಯ ಮಹತ್ವದ ಸ್ಥಳವಾಗಿದೆ ಎಂದು ನೆನಪಿಸಿದ್ದಾರೆ. ಮತ್ತೆ ಈ ಸ್ಥಳದಲ್ಲಿ ಮರವೊಂದು ಬೆಳೆದು ನಿಂತು ನೆರಳು ಕಲ್ಪಿಸುವ ದಿನಗಳನ್ನು ಜನರು ಎದುರು ನೋಡಬೇಕಿದೆ.

- ಶಶಿ