ಮಡಿಕೇರಿ, ಜು. ೩: ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಅಗತ್ಯ ಮುಂಜಾಗ್ರತೆ ವಹಿಸಲಾಗುತ್ತಿದೆ. ಪ್ರಾಕೃತಿಕ ವಿಕೋಪದಂತಹ ಪರಿಸ್ಥಿತಿ ಎದುರಾದಲ್ಲಿ ರಕ್ಷಣಾ ಕಾರ್ಯದಲ್ಲಿ ಆಡಳಿತದೊಂದಿಗೆ ಸಾರ್ವಜನಿಕರು, ಸ್ವಯಂ ಸೇವಕರು ಕೈಜೋಡಿಸ ಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮನವಿ ಮಾಡಿದರು.
ನಗರದ ಮೈತ್ರಿ ಪೊಲೀಸ್ ಭವನದಲ್ಲಿ ನಡೆದ ವಿವಿಧ ಸಂಘ ಸಂಸ್ಥೆ ಪ್ರಮುಖರು, ಸ್ವಯಂ ಸೇವಕರು, ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಳೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪ್ರಮಾಣ ಇನ್ನಷ್ಟು ಹೆಚ್ಚಾಗಿ ಅಪಾಯ- ಸಂಭವಿಸಬಹುದು ಈ ಸಂದರ್ಭದಲ್ಲಿ ದುಸ್ಸಾಟಗಳನ್ನು ಮಾಡದೆ ರಕ್ಷಣಾ ತಂಡ, ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಿ ದುರಂತಗಳು ನಡೆಯದಂತೆ ಎಚ್ಚರಿಕೆ ವಹಿಸೋಣ ಎಂದು ಕರೆ ನೀಡಿದರು.
ವಿಪತ್ತು ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ಸ್ಪಂದಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯುತ್ ಕಂಬಗಳು ಧರೆಗುರುಳಿರುವ ಹಂತದಲ್ಲಿರುವ ಸಂದರ್ಭ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಬೇಕು. ಅನಾಹುತವಾಗುವ ತನಕ ಕಾಯಬಾರದು. ರಕ್ಷಣಾ ಕಾರ್ಯಾಚರಣೆ ಸಂದರ್ಭ ಭಾವನಾತ್ಮಕವಾಗಿ ನಡೆದುಕೊಳ್ಳುವ ಬದಲು ಇದೊಂದು ಕರ್ತವ್ಯ ಎಂದು ಸ್ಪಂದಿಸಬೇಕು ಎಂದರು.
ಹೆಚ್ಚುವರಿ ಪೊಲೀಸ್
ವರಿಷ್ಠಾಧಿಕಾರಿ ದಿನೇಶ್ ಮಾತನಾಡಿ, ನಗರದಲ್ಲಿ ಉಲ್ಬಣವಾಗಿರುವ ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ವಿಪತ್ತು ನಿರ್ವಹಣ ಪರಿಣಿತ ಅನನ್ಯ ವಾಸುದೇವ್ ಮಾತನಾಡಿ, ಭೂಕುಸಿತ ಸಂಭವಿಸುವ ಸಂದರ್ಭ ಕೆಲವೊಂದು ಸೂಚನೆ ಸಿಗುತ್ತದೆ. ಬೋರ್ವೆಲ್ನಲ್ಲಿ ಕೆಂಪು ಬಣ್ಣದ ನೀರು ಬಂದರೆ ಮಣ್ಣು ಸವಿಯುತ್ತಿದೆ ಎಂದು ಅರ್ಥ. ಇದನ್ನು ತಿಳಿದುಕೊಳ್ಳಬೇಕು. ಭೂಮಿಯಲ್ಲಿ ದಿಢೀರ್ ಬಿರುಕು ಕಂಡುಬAದರೆ ಎಚ್ಚರವಹಿಸಿ ಆಡಳಿತದ ಗಮನಕ್ಕೆ ತರಬೇಕು ಎಂದು ವಿವರಿಸಿದರು.
ಅಪಾಯದಲ್ಲಿರುವವರ ಸ್ಥಳಾಂತರಕ್ಕೆ ಒತ್ತಾಯ
ಸಭೆಯಲ್ಲಿ ಮಾತನಾಡಿದ ನಗರಸಭಾ ಮಾಜಿ ಸದಸ್ಯ ಉಣ್ಣಿಕೃಷ್ಣ, ಅಪಾಯದಲ್ಲಿ ನೆಲೆಸಿದ್ದವರಿಗೆ ಬೇರೆಡೆ ಮನೆ ಒದಗಿಸಿದರೂ ಮತ್ತೇ ಅಲ್ಲಿಯೇ ಬಂದು ನೆಲೆಸುತ್ತಿದ್ದಾರೆ. ಅಂತವರನ್ನು ಸ್ಥಳಾಂತರಿಸ ಬೇಕೆಂದು ಒತ್ತಾಯಿಸಿದರು.