ಮಡಿಕೇರಿ, ಜು. ೩ : ಸೂರ್ಲಬ್ಬಿಯ ಪ್ರಸಿದ್ಧ ಜಲಪಾತ ಮೇದುರ ಫಾಲ್ಸ್ ಸ್ಥಳೀಯರಿಗೆ ಚಿರಪರಿಚಿತವಾಗಿದ್ದರೂ ಪ್ರವಾಸಿಗರ ಆಗಮನ ಈ ಹಿಂದೆ ಬಹಳ ವಿರಳವಾಗಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಪ್ರವಾಸೋದ್ಯಮ ಉತ್ತೇಜನ ಹಿನ್ನೆಲೆ ನಿರ್ಜನ ಪ್ರದೇಶದಲ್ಲಿರುವ ಈ ಜಲಪಾತವೂ ಕೂಡ ಪ್ರಖ್ಯಾತಿ ಗಳಿಸತೊಡಗಿದೆ. ಹೊರಜಿಲ್ಲೆಗಳಿಂದ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಸೆಲ್ಫಿ ತೆಗೆದುಕೊಂಡು ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಆದರೆ ಅಧಿಕ ಮಳೆಯಿಂದ ಭೋರ್ಗರೆದು ಹರಿಯುತ್ತಿರುವ ಜಲಪಾತ ಹತ್ತಿರ ತೆರಳದ ಹಾಗೆ ಗರ್ವಾಲೆ ಪಂಚಾಯಿತಿ ವತಿಯಿಂದ ಸೂಚನಾ ಫಲಕಗಳನ್ನು ಹಾಕಿ ಟೇಪ್‌ಗಳನ್ನು ಅಡ್ಡಕಟ್ಟಲಾಗಿದ್ದರೂ ಇದನ್ನು ದಾಟಿ ಕೆಲ ಪ್ರವಾಸಿಗರು ಜಲಪಾತದತ್ತ ತೆರಳುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಪಂಚಾಯಿತಿಯು
(ಮೊದಲ ಪುಟದಿಂದ) ಈ ವ್ಯಾಪ್ತಿಯಲ್ಲಿ ಯಾವುದೇ ಸಿಬ್ಬಂದಿಯನ್ನು ನೇಮಿಸದೆ ಇರುವುದು ಕೆಲ ಪ್ರವಾಸಿಗರು ಈ ರೀತಿ ವರ್ತಿಸಿರುವುದಕ್ಕೆ ಕಾರಣವಾಗಿದೆ. ತಕ್ಷಣವೇ ಇಲ್ಲಿ ಸಿಬ್ಬಂದಿಗಳನ್ನು ನೇಮಿಸುವುದು ಅಥವಾ ಸಿ.ಸಿ ಕ್ಯಾಮರಾ ಕಣ್ಗಾವಲು ಮೂಲಕ ಅಪಾಯ ಸಂಭವಿಸುವುದನ್ನು ತಡೆಗಟ್ಟುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಜಲಪಾತದ ಸಮೀಪ ‘ಇಲ್ಲಿ ಕಸವನ್ನು ಹಾಕಬೇಡಿ’ ಎಂಬ ಗರ್ವಾಲೆ ಪಂಚಾಯಿತಿಯ ಫಲಕವು ಕೇವಲ ನಾಮಕಾವಾಸ್ಥೆಯಂತಿದೆ. ಪ್ರಕೃತಿಯ ಸೊಬಗನ್ನು ಕೆಡಿಸುವ, ಮಾಲಿನ್ಯಕ್ಕೆ ಕಾರಣವಾಗುವ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳು ಪಂಚಾಯಿತಿ ವತಿಯಿಂದ ಇರಿಸಲಾದ ಕಸದ ಬುಟ್ಟಿಗಳಲ್ಲಿ ಭರ್ತಿಯಾಗಿ ಜಲಪಾತ ಆವರಣದ ಸುತ್ತ ಚೆಲ್ಲಾಪಿಲ್ಲಿಯಾಗಿದೆ.