ಈಶಾನ್ವಿ

ವೀರಾಜಪೇಟೆ, ಜು. ೨: ಕೇರಳದ ಶಬರಿಮಲೆ, ಗುರುವಾಯೂರು, ತಳಿಪರಂಬದ ರಾಜ ರಾಜೇಶ್ವರಿ, ಮಾಡೈಕಾವು ಪರಶಿಣಿಕಡವು, ಮಾಮಾನಿಕುನ್ನ್ ಮುಂತಾದ ಪುಣ್ಯಕ್ಷೇತ್ರಗಳು ಶತಮಾನಗಳಿಂದಲೂ ಕೊಡಗಿನ ಯಾತ್ರಾರ್ತಿಗಳನ್ನು ಆಕರ್ಷಿಸುತ್ತಾ ಬಂದಿದ್ದರೆ ಈ ವರ್ಷ ಕೇರಳದ ಇನ್ನೊಂದು ಪುಣ್ಯಕ್ಷೇತ್ರ ಕೊಡಗಿನವರನ್ನು ಆಕರ್ಷಿಸಿದೆ.

ಕಣ್ಣೂರು ಜಿಲ್ಲೆಯಲ್ಲಿರುವ ಕೊಟ್ಟಿಯೂರು ಶಿವ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ೨೭ ದಿನಗಳ ವೈಶಾಖ ಮಹೋತ್ಸವ ನಡೆಯುತ್ತಿತ್ತು. ಈ ವರ್ಷ ಒಮ್ಮೆಲೆ ಕೊಟ್ಟಿಯೂರಿನ ಕೀರ್ತಿ ಕೊಡಗು ಸೇರಿದಂತೆ ಕರ್ನಾಟಕದಾದ್ಯಂತ ಭಾರೀ ಸಂಚಲನ ಮೂಡಿಸಿತ್ತು.

ಪುರಾಣ ಕಥೆಯೊಂದಿಗೆ ಸಂಬAಧವಿರುವ ಅಕ್ಕರೆಕೊಟ್ಟಿಯೂರು ಸನ್ನಿಧಿಯಲ್ಲಿ ಸ್ಥಾವರ ರೂಪದ ಶಾಶ್ವತ ದೇವಸ್ಥಾನಗಳಿಲ್ಲ. ವೈಶಾಖ ಮಹೋತ್ಸವಕ್ಕಾಗಿ ಪ್ರಕೃತಿದತ್ತವಾದ ತಾತ್ಕಾಲಿಕ ಚಪ್ಪರ ಮಂದಿರ ನಿರ್ಮಿಸಲಾಗಿದ್ದು ಪರಮೇಶ್ವರನ ಉದ್ಭವ ಲಿಂಗ ದರ್ಶನಕ್ಕಾಗಿ ಕೊಡಗಿನಿಂದ ಸಾವಿರಾರು ಭಕ್ತರು ಹೋಗಿ ಬಂದಿದ್ದಾರೆ.

ಜುಲೈ ೪ ರವರೆಗೆ ಮಹೋತ್ಸವ ನಡೆಯಲಿದ್ದು ಜಿಲ್ಲೆಯಿಂದ ಸಾವಿರಾರು ಭಕ್ತರು ಹೋಗಿ ಬರುತ್ತಿದ್ದಾರೆ. ವಾವಲಿ ನದಿ ತಟದಲ್ಲಿರುವ ಕೊಟ್ಟಿಯೂರು ಕ್ಷೇತ್ರ ಸುಮಾರು ೩೦,೦೦೦ ಎಕರೆ ವನ್ಯಧಾಮ ವ್ಯಾಪ್ತಿಯಲ್ಲಿ ಬರುತ್ತದೆ. ಶಬರಿಮಲೆಯಂತೆ ಇದು ಕೂಡ ಪ್ರಕೃತಿ ರಮಣೀಯ ತಾಣ. ಹತ್ತಾರು ಪ್ರಾಚೀನ ಸಾಂಪ್ರದಾಯಿಕ ಆಚರಣೆಗಳು ಈಗಲೂ ಇಲ್ಲಿ ಮೂಲ ರೂಪದಲ್ಲಿ ಉಳಿದುಕೊಂಡಿದೆ. ಈ ವರ್ಷ ಕೊಟ್ಟಿಯೂರು ಮಹೋತ್ಸವಕ್ಕೆ ಡಿಜಿಟಲ್ ಮಾಧ್ಯಮದಲ್ಲಿ ಭಾರೀ ಪ್ರಚಾರ ಸಿಗುತ್ತಿದ್ದು, ಮನೆ ಮನೆಗಳಲ್ಲೂ ಕೊಟ್ಟಿಯೂರು ಹೆಸರೇ ನಲಿದಾಡುತ್ತಿದೆ.

ಮೊಬೈಲ್ ಸ್ಟೇಟಸ್, ಡಿಪಿಗಳಲ್ಲಿ ಕೊಟ್ಟಿಯೂರು ಕಂಗೊಳಿಸುತ್ತಿದೆ. ಯೂಟ್ಯೂಬ್‌ನಲ್ಲಿ ಕೊಟ್ಟಿಯೂರಿನ ಹೇರಳ ವೀಡಿಯೋಗಳಿದ್ದು ಲಕ್ಷಾಂತರ ಜನ ವೀಕ್ಷಿಸುತ್ತಿದ್ದಾರೆ. ಪ್ರತಿ ವರ್ಷ ವೈಶಾಖ ಮಹೋತ್ಸವ ನಡೆಯುತ್ತಿದ್ದರೂ ಈ ಬಾರಿ ಕೇರಳದಿಂದಲೂ ಭಾರೀ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿದ್ದಾರೆ. ಕೊಡಗಿನಿಂದಲೂ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ.

ಪೌರಾಣಿಕ ಹಿನ್ನೆಲೆ

ಪ್ರಜಾಪತಿ ದಕ್ಷ ಮಹಾರಾಜ ಯಾಗ ಮಾಡಿದ ಜಾಗವಿದು ಎಂಬುದು ಐತಿಹ್ಯ. ಇದೇ ಸ್ಥಳದಲ್ಲಿ ಸತೀದೇವಿ ತನ್ನನ್ನು ತಾನು ಯಜ್ಞಕುಂಡಕ್ಕೆ ಅರ್ಪಣೆಮಾಡಿಕೊಂಡಳು ಎಂಬ ಪ್ರತೀತಿ ಇದೆ. ಆ ಯಜ್ಞ ನಡೆದ ಸ್ಥಳವೇ ಇದು ಎಂಬುದು ಇಲ್ಲಿನ ಪ್ರತೀತಿ. ಈ ಯಾಗದ ಬಳಿಕ ಶಿವ ತನ್ನ ಪತ್ನಿಗೆ ಆದ ಸಂಕಷ್ಟ ಮತ್ತು ಅದರಿಂದ ತನಗಾದ ನೋವು ಜಗತ್ತಿನಲ್ಲಿ ಇನ್ನಾರಿಗೂ ಬರಬಾರದು, ಹಾಗಾಗಿ ಯಾವೆಲ್ಲಾ ದಂಪತಿಗೆ ಇಂತಹ ಕಷ್ಟ ಬಂದಿದೆಯೋ ಅವರು ಇಲ್ಲಿ ದರ್ಶನ ಮಾಡಿದ್ರೆ ಅವರ ಕಷ್ಟ ನೀಗಿಸುತ್ತೇನೆ ಎಂದು ಅಂದು ಆಶೀರ್ವಾದ ಮಾಡಿದ್ದನಂತೆ.

ದಿನಕ್ಕೆ ಎರಡು ಶೀವೇಲಿ ಆಚರಣೆ

ಇಲ್ಲಿ ದಿನಕ್ಕೆ ಎರಡು ಶೀವೇಲಿ ಆಚರಣೆ ನಡೆಯುತ್ತದೆ. ಅಂದರೆ ಎರಡು ಆನೆಗಳನ್ನು ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ಇದು ಶಿವ ಮತ್ತು ಪಾರ್ವತಿಯ ಸ್ವರೂಪ. ಹೀಗೆ ಕೊಟ್ಟಿಯೂರು ಶ್ರೀ ಕ್ಷೇತ್ರ ವಿಶಿಷ್ಟ ಆಚರಣೆಗಳ ತವರೂರಾಗಿದೆ.

ಹಲವು ವಿಶೇಷತೆಗಳ ತಾಣ

ಕಣ್ಣೂರು ಜಿಲ್ಲಾ ಕೇಂದ್ರದಿAದ ೬೮ ಕಿಲೋಮೀಟರ್ ದೂರದಲ್ಲಿದೆ ಕೊಟ್ಟಿಯೂರು ಕ್ಷೇತ್ರ. ವಾವಲಿ ನದಿಯ ಎಡದಂಡೆಯಲ್ಲಿ ಇಕ್ಕರೆ ಕೊಟ್ಟಿಯೂರು ಶಾಶ್ವತ ದೇವಾಲಯವಿದೆ. ಬಲದಂಡೆಯಲ್ಲಿ ಅಕ್ಕರೆ ಕೊಟ್ಟಿಯೂರು ಉದ್ಭವ ಲಿಂಗವಿದೆ.

ಅಕ್ಕರೆಕೊಟ್ಟಿಯೂರಿನ ೨೭ ದಿನಗಳ ವೈಶಾಖ ಮಹೋತ್ಸವ ಸಂದರ್ಭ ಇಕ್ಕರೆ ಕೊಟ್ಟಿಯೂರಿನಲ್ಲಿ ಏನೂ ವಿಶೇಷತೆ ಇರುವುದಿಲ್ಲ. ಜೂ. ೮ ರಂದು ಆರಂಭಗೊAಡ ವೈಶಾಖ ಮಹೋತ್ಸವ ಜುಲೈ ೪ ರಂದು ಕೊನೆಗೊಳ್ಳಲಿದೆ. ವಾವಲಿ ನದಿ ದಂಡೆಯಲ್ಲೇ ಕ್ಷೇತ್ರವಿದ್ದು ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇಲ್ಲಿರುವ ಕಲ್ಲುಗಳನ್ನು ತಿಕ್ಕಿದರೆ ಪವಿತ್ರ ಗಂಧ ಸಿಗುತ್ತದೆ.