ಕೂಡಿಗೆ, ಜು. ೨: ಜಿಲ್ಲೆಯಲ್ಲಿ ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿರುವ ಕುಶಾಲನಗರ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿನ ಪಶುಪಾಲನಾ ಇಲಾಖೆಯ ಪಶು ಆಸ್ಪತ್ರೆಗಳಲ್ಲಿ ಪಶುವೈದ್ಯರೇ ಇಲ್ಲದೆ ಹಸುಗಳಿಗೆ ಚಿಕಿತ್ಸೆ ಕೊಡಿಸಲು ಪರದಾಡು ವಂತಹ ಪ್ರಸಂಗ ಎದುರಾಗಿದೆ.

ಕುಶಾಲನಗರ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ವಿವಿಧ ತಳಿಗಳ ಲಕ್ಷಾಂತರ ರೂಪಾಯಿ ಬೆಲೆಬಾಳುವ ಹಸುಗಳನ್ನು ರೈತರು ಸಾಕಿದ್ದಾರೆ. ನೂರಾರು ಕುಟುಂಬಗಳು ಹೈನುಗಾರಿಕೆಯ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಜಿಲ್ಲೆಯ ಅರೆಮಲೆನಾಡು ಪ್ರದೇಶವಾದ ಈ ಭಾಗ ಹೈನುಗಾರಿಕೆಗೆ ಸೂಕ್ತವಾದ ಹವಾಮಾನವನ್ನು ಹೊಂದಿರುವ ಜಾಗವಾಗಿದೆ. ಆದರೆ ಹಸುಗಳಿಗೆ ಸಮರ್ಪಕವಾದ ಚಿಕಿತ್ಸೆ ಕೊಡಿಸಲು ಬೇರೆ ಜಿಲ್ಲೆಯ ಪಶುವೈದ್ಯರನ್ನು ಅವಲಂಬಿಸುವ ಪ್ರಸಂಗ ಎದುರಾಗಿದೆ. ಆಸ್ಪತ್ರೆ ಇದ್ದರೂ ಪಶುವೈದ್ಯರಿಲ್ಲದ ಸ್ಥಿತಿಯಿಂದಾಗಿ ಪಶುಪಾಲಕರು ಕಂಗಾಲಾಗಿದ್ದಾರೆ. ಹಲವು ವರ್ಷಗಳ ಬೇಡಿಕೆ ಇಂದಿಗೂ ಬೇಡಿಕೆಯಾಗಿಯೇ ಉಳಿದುಕೊಂಡಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಪ್ರಾಥಮಿಕ ಪಶು ಚಿಕಿತ್ಸಾಲಯಗಳಲ್ಲಿ ತಾಲೂಕಿನಲ್ಲಿ ಒಬ್ಬ ಪಶು ವೈದ್ಯಾಧಿಕಾರಿ, ಇದೀಗ ಅರೆಕಾಲಿಕವಾಗಿ ಇಬ್ಬರು ವೈದ್ಯರ ನೇಮಕ ಆಗಿದೆ. ಆದರೆ ಈ ವ್ಯಾಪ್ತಿಯಲ್ಲಿ ೧೦ ಆಸ್ಪತ್ರೆಗಳಿವೆ.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹುದುಗೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕುಶಾಲನಗರ, ಹೊಸಕೋಟೆ, ಚೆಟ್ಟಳ್ಳಿ, ಸುಂಟಿಕೊಪ್ಪ ಸೇರಿದಂತೆ ಅನೇಕ ಕಡೆಗಳಲ್ಲಿ ಪಶುಪಾಲನಾ ಇಲಾಖೆಯ ಪಶು ಆಸ್ಪತ್ರೆಗಳು ಇವೆ. ಆದರೆ ಒಬ್ಬರೇ ಪಶುವೈದ್ಯರು, ಇಬ್ಬರು ಅರೆಕಾಲಿಕವಾಗಿ ನೇಮಕವಾದ ವೈದ್ಯರಿರುವುದರಿಂದ ಸಮಸ್ಯೆಯಾಗಿದೆ.

ಹೈನುಗಾರಿಕೆಯಲ್ಲಿ ತೊಡಗಿರುವ ಗ್ರಾಮಗಳಾದ ಕೂಡಿಗೆ, ಸೀಗೆಹೊಸೂರು, ಮದಲಾಪುರ, ಹುಲಸೆ, ಹುದುಗೂರು, ಹೆಬ್ಬಾಲೆ, ಶಿರಂಗಾಲ, ತೊರೆನೂರು, ನಂಜರಾಯಪಟ್ಟಣ, ಹೊಸಕೋಟೆ ಭಾಗಗಳಲ್ಲಿ ರೈತರು ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಆದರೆ ಖಾಯಂ ಆಗಿ ಚಿಕಿತ್ಸೆ ನೀಡಲು ಒಬ್ಬರೇ ಇದ್ದರೆ ಇವರಿಂದ ಚಿಕಿತ್ಸೆ ನೀಡಲು ಸಾಧ್ಯವೇ...? ಎಂಬುದು ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಪ್ರಶ್ನೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ೫೦ ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಸಾವಿರಾರು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹಾಸನ ಹಾಲು ಒಕ್ಕೂಟದ ನಿಯಮಾನುಸಾರ ಸಹಕಾರ ಸಂಘಗಳ ರಚನೆ ಮಾಡಿ ಸಂಘದ ಮೂಲಕ ರೈತರು ಹಾಲನ್ನು ಸಂಘಕ್ಕೆ ಹಾಕಿ ಅದರ ಮುಖೇನ ಹಣವನ್ನು ಪಡೆಯುತ್ತಾರೆ.

ಅದರಲ್ಲಿ ಸರಕಾರದ ಸಹಾಯಧನ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಸಂಘದ ಮೂಲಕ ಪಡೆದು ರೈತರು ಆರ್ಥಿಕವಾಗಿ ಸಬಲರಾಗಲು ಹೈನುಗಾರಿಕೆ ಸಹಕಾರಿಯಾಗಿದೆ.

ಹೈನುಗಾರಿಕೆಯ ಮೂಲಕ ಅಭಿವೃದ್ಧಿಗೆ ಪೂರಕವಾಗಲು ತಾಲೂಕು ಮಟ್ಟದಲ್ಲಿ ೧೫ ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ. ಹೈನುಗಾರಿಕೆ ಮಾಡಿದ ರೈತರ ಹಾಲನ್ನು ಖರೀದಿಸುವುದೇ ಪ್ರಮುಖ ಉದ್ದೇಶವಾಗಿದೆ.

ಹೈಬ್ರಿಡ್ ತಳಿಯ ಹಸುಗಳಿಗೆ ಅಧಿಕ ಬೆಲೆಯನ್ನು ನೀಡಿ ಖರೀದಿಸಿ, ನೂರಾರು ರೈತರು ಸಾಕುತ್ತಿದ್ದಾರೆ. ಆದರೆ ಕಳೆದ ೨೫ ವರ್ಷಗಳ ಹಿಂದೆ ಪ್ರಾರಂಭಗೊAಡಿರುವ ಪಶುಪಾಲನಾ ಇಲಾಖೆಯ ಪಶು ಆರೋಗ್ಯ ಕೇಂದ್ರಗಳಿಗೆ ಕಳೆದ ೧೨ ವರ್ಷಗಳಿಂದಲೂ ಪಶುವೈದ್ಯರು ಇಲ್ಲದೆ ತಾಲೂಕು ವ್ಯಾಪ್ತಿಯ ರೈತರು ಹಸುಗಳ ಚಿಕಿತ್ಸೆಗಾಗಿ ಪರದಾಡು ವಂತಾಗಿದೆ.

ಅಲ್ಲದೆ ಇರುವ ಪಶುವೈದ್ಯರು ನಾಲ್ಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಂತಾಗಿದೆ. ತಾಲೂಕಿ ನಲ್ಲಿರುವ ಇಬ್ಬರು ಪಶು ಪರಿವೀಕ್ಷಕರು ಅನೇಕ ಪಶು ಆಸ್ಪತ್ರೆಗಳಲ್ಲಿ ರೈತರ ಒತ್ತಾಯದ ಮೇರೆಗೆ ಚಿಕಿತ್ಸೆ ನೀಡಲು ಮುಂದಾಗಿ ದ್ದಾರೆ. ಕುರಿ, ಮೇಕೆ, ಕೋಳಿ ಸೇರಿದಂತೆ ಮನೆಯಲ್ಲಿ ಸಾಕುವ ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ಸಹ ಸಮಸ್ಯೆ ಎದುರಾಗಿದೆ.

ಪಶು ವೈದ್ಯರ ನೇಮಕಕ್ಕೆ ಜಿಲ್ಲಾಡಳಿತ, ಶಾಸಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಮನವಿಯನ್ನು ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಈ ವ್ಯಾಪ್ತಿಯ ಅನೇಕ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ರಾಜ್ಯ ಪಶುಸಂಗೋಪನೆ ಸಚಿವ ವೆಂಕಟೇಶ ಅವರಿಗೂ ಮನವಿಯನ್ನು ನೀಡಲಾಗಿದೆ ಎಂದು ವ್ಯಾಪ್ತಿಯ ರೈತರು ತಿಳಿಸಿದ್ದು, ಸ್ಪಂದನವಿಲ್ಲದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಲುಬಾಯಿ ಜ್ವರಕ್ಕೆ ಇಲಾಖೆ ವತಿಯಿಂದ ಚುಚ್ಚುಮದ್ದು ನೀಡಿದರೂ, ಹೊಸ ರೋಗಗಳು ಕಾಣಿಸಿಕೊಂಡು ಅನೇಕ ಹಸುಗಳು, ಕರುಗಳು ಸಹ ಸಾವನ್ನಪ್ಪಿದ ಘಟನೆ ಗಳು ಗ್ರಾಮಾಂತರ ಪ್ರದೇಶಗಳಲ್ಲಿ ನಡೆದಿವೆ. ಪಶುಪಾಲನಾ ಇಲಾಖೆಯ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ರೈತರ ಸಮಸ್ಯೆಗಳನ್ನು ಅರಿತು ಪಶುವೈದ್ಯರ ನೇಮಕಕ್ಕೆ ಮುಂದಾಗುವ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.