ಸೋಮವಾರಪೇಟೆ, ಜೂ. ೩೦: ಭಾರೀ ಮಳೆಯಿಂದ ತಡೆಗೋಡೆ ಕುಸಿತಗೊಂಡಿರುವ ಇಲ್ಲಿನ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ಆವರಣ ಹಾಗೂ ಕುಸಿಯುವ ಭೀತಿ ಎದುರಾಗಿರುವ ಟರ್ಫ್ ಮೈದಾನ ಬಳಿಯ ತಡೆಗೋಡೆಯನ್ನು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪರಿಶೀಲಿಸಿದರು. ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ಮುಂಭಾಗದಲ್ಲಿ ತಡೆಗೋಡೆಯ ಅಡಿಪಾಯದ ಮಣ್ಣು ಕುಸಿದಿದ್ದು, ನಂತರ ಯಂತ್ರದ ಮೂಲಕ ಮಣ್ಣು ತೆರವುಗೊಳಿಸಿರುವ ಬಗ್ಗೆ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾಹಿತಿ ನೀಡಿದರು.
ಅಂತೆಯೇ ಟರ್ಫ್ ಮೈದಾನದ ಒಂದು ಬದಿಗೆ ನಿರ್ಮಾಣ ಮಾಡಿರುವ ತಡೆಗೋಡೆ ಭಾರೀ ಮಳೆಯಿಂದಾಗಿ ವಾಲಿದ್ದು, ಕುಸಿಯುವ ಆತಂಕ ಇರುವ ಬಗ್ಗೆ ಕ್ರೀಡಾಪಟುಗಳು ಮಾಹಿತಿ ನೀಡಿದರು.
ಈ ಬಗ್ಗೆ ಸಂಬAಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಮಾತನಾಡಿದ ರಂಜನ್, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ತಡೆಗೋಡೆ ಕುಸಿದರೆ ಸಂಬAಧಿಸಿದ ಗುತ್ತಿಗೆದಾರರಿಂದಲೇ ಪುನರ್ ನಿರ್ಮಾಣ ಮಾಡಿಸಬೇಕೆಂದು ತಾಕೀತು ಮಾಡಿದರು. ಈ ಸಂದರ್ಭ ಪಕ್ಷದ ಮುಖಂಡರಾದ ಎಸ್.ಆರ್. ಸೋಮೇಶ್, ಶರತ್ ಚಂದ್ರ, ಒಕ್ಕಲಿಗರ ಸಂಘದ ಸುರೇಶ್ ಚಕ್ರವರ್ತಿ, ಚಂಗಪ್ಪ, ರಾಜೇಶ್, ನಂದಕುಮಾರ್ ಸೇರಿದಂತೆ ಇತರರು ಇದ್ದರು.