ಹೆಚ್.ಜೆ. ರಾಕೇಶ್

ಮಡಿಕೇರಿ, ಜೂ. ೨೯ : ಕೊಡಗು ಜಿಲ್ಲೆಯ ವಿದ್ಯುತ್ ಜಾಲ ಬಲವರ್ಧನೆಗೆ ರೂ. ೨೨೬ ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಿ ಅನುಷ್ಠಾನ ಮಾಡಲಾಗುತ್ತಿದೆ. ಕಾಮಗಾರಿಗಳು ಜಿಲ್ಲೆಯಾದ್ಯಂತ ಪ್ರಗತಿಯಲ್ಲಿದ್ದು, ಮಳೆಗಾಲದಲ್ಲಿ ಎದುರಾಗುವ ವಿದ್ಯುತ್ ಅಡಚಣೆಗೆ ಪರಿಹಾರದೊಂದಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯ ವಿಶ್ವಾಸ ಮೂಡಿದೆ. ಸರಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗುತ್ತಿದ್ದು, ೫ ತಾಲೂಕುಗಳ ಒಟ್ಟು ೫೩೬ ಕಿ.ಮೀ. ವ್ಯಾಪ್ತಿಯಲ್ಲಿ ಕಾಮಗಾರಿಗಳು ಸಮರೋಪಾದಿಯಲ್ಲಿ ಸಾಗುತ್ತಿವೆ. ಜಿಲ್ಲೆಯಲ್ಲಿ ಬಹುತೇಕ ವಿದ್ಯುತ್ ಮಾರ್ಗಗಳು ಅರಣ್ಯ ಪ್ರದೇಶ, ಕಾಫಿ ತೋಟಗಳು ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಹಾದು ಹೋಗಿರು ವುದರಿಂದ ವಿದ್ಯುತ್ ಜಾಲದಲ್ಲಿ ವಿಪರೀತ ಸಮಸ್ಯೆ ಉಂಟಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಕೊಂಬೆಯೊAದು ಬಿದ್ದರೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಕಾರ್ಗತ್ತಲು ಆವರಿಸಿ ವಾರಗಟ್ಟಲೆ ವಿದ್ಯುತ್ ಕಡಿತಗೊಂಡು ಪರಿಸ್ಥಿತಿ ಬಿಗಡಾಯಿಸುತ್ತದೆ. ಇದರೊಂದಿಗೆ ವಿದ್ಯುತ್ ಲೈನ್‌ಗಳು ಹಳೆಯದಾಗಿ ವಿದ್ಯುತ್ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕರುಗಳಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಚೆಸ್ಕಾಂ) ಯೋಜನೆ ರೂಪಿಸಲು ಸೂಚನೆ ನೀಡಿ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದರು.

ಇದೀಗ ಯೋಜನೆಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡಿದ್ದು, ಹಲವು ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ಜಿಲ್ಲೆಯಲ್ಲಿ ಒಟ್ಟು ೫ ಉಪವಿಭಾಗ, ೨೩ ಶಾಖಾ ಕಚೇರಿಗಳಿದ್ದು, ೯೨ ಕಡೆ ೧೧ ಕೆವಿ ಮಾರ್ಗಗಳಲ್ಲಿ ೭೯೫೨ ಪರಿವರ್ತಕಗಳು, ೪೫೭೭ ಕಿ.ಮೀ. ಹೆಚ್.ಟಿ. ಮಾರ್ಗ, ೭೩೩೧ ಕಿ.ಮೀ. ಎಲ್.ಟಿ. ಮಾರ್ಗಗಳಿವೆ. ಜಿಲ್ಲೆಯಲ್ಲಿ ೨,೨೯,೨೧೯ ಗ್ರಾಹಕರಿದ್ದಾರೆ.

ಜಿಲ್ಲೆಗೆ ಬಿಡುಗಡೆಯಾಗಿರುವ ಒಟ್ಟು ೨೨೬ ಕೋಟಿ ಅನುದಾನದ ಪೈಕಿ ೧೨೦ ಕೋಟಿ ವೆಚ್ಚದ ಕಾಮಗಾರಿ ವೀರಾಜಪೇಟೆ ಕ್ಷೇತ್ರ ಹಾಗೂ ರೂ. ೧೦೬ ಕೋಟಿ ವೆಚ್ಚದ ಕಾಮಗಾರಿ ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಗುತ್ತಿದೆ. ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿ ಅಂತ್ಯಕ್ಕೆ ಕಾಮಗಾರಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.

ಏನಿದು ಯೋಜನೆ?

ಜಿಲ್ಲೆಯಲ್ಲಿ ಅನೇಕ ವರ್ಷದಿಂದ ವಿದ್ಯುತ್ ಮಾರ್ಗಗಳ ಮರುಸ್ಥಾಪನೆ ಅಥವಾ ಬಲವರ್ಧನೆಗೊಳಿಸುವ ಕೆಲಸಗಳು ನಡೆದಿರುವುದಿಲ್ಲ. ಪರಿಣಾಮ ೪ಐದÀನೇ ಪುಟಕ್ಕೆ

(ಮೊದಲ ಪುಟದಿಂದ) ಆಗಾಗ್ಗೆ ವಿದ್ಯುತ್ ಅಡಚಣೆಗಳು ಸಂಭವಿಸುತ್ತಿರುತ್ತವೆ. ಅದಲ್ಲದೆ ಶಾಂತಳ್ಳಿ, ಭಾಗಮಂಡಲದAತಹ ಪ್ರದೇಶಗಳಲ್ಲಿ ಬರೋಬ್ಬರಿ ೧೦೦ ಕಿ.ಮೀ. ತನಕ ಒಂದೇ ಲೈನ್ ಇದ್ದು, ಎಲ್ಲಾದರೂ ಒಂದು ಕಡೆಗಳಲ್ಲಿ ಮರ ಅಥವಾ ಕೊಂಬೆ ವಿದ್ಯುತ್ ಲೈನ್ ಬಿದ್ದರೆ ಇಡೀ ೧೦೦ ಕಿ.ಮೀ. ಪ್ರದೇಶದಲ್ಲಿ ವಿದ್ಯುತ್ ‘ಟ್ರಿಪ್’ಗೊಂಡು ಸಂಪರ್ಕ ಕಡಿತಗೊಳ್ಳುವುದು ಸಾಮಾನ್ಯವೆಂಬAತಾಗಿದೆ. ಅಮ್ಮತ್ತಿ, ವೀರಾಜಪೇಟೆ, ತಿತಿಮತಿ, ಹಾತೂರು, ಭಾಗಮಂಡಲ ಸೇರಿದಂತೆ ವಿವಿಧೆಡೆ ಅತೀ ಹೆಚ್ಚಿನ ವಿದ್ಯುತ್ ವೋಲ್ಟೇಜ್ ಸಮಸ್ಯೆಯೂ ಕಂಡುಬರುತ್ತದೆ.

ಈ ಸಮಸ್ಯೆಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಅಲ್ಯುಮಿನಿಯಂ ತಂತಿಗಳಿಗೆ ‘ಕವರ್ ಕಂಡಕ್ಟರ್’ ಅಳವಡಿಸಿ, ಟ್ರಾನ್ಸ್ಫಾರ್ಮರ್‌ಗಳು ಸೇರಿದಂತೆ ಅಗತ್ಯ ಪರಿಕರಗಳನ್ನು ಅಳವಡಿಸಿ ಸಮರ್ಪಕವಾಗಿ ವಿದ್ಯುತ್ ಒದಗಿಸುವುದರೊಂದಿಗೆ ಮಳೆಗಾಲದಲ್ಲಿ ಸಂಭವಿಸುವ ಸಮಸ್ಯೆಗಳನ್ನು ದೂರ ಮಾಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಭರದಿಂದ ಸಾಗುತ್ತಿರುವ ಕಾಮಗಾರಿ

ಜಿಲ್ಲೆಯ ಹಲವೆಡೆ ವಿದ್ಯುತ್ ಕಾಮಗಾರಿ ಭರದಿಂದ ಸಾಗುತ್ತಿದೆ. ೩ ಏಜೆನ್ಸಿಗಳಿಗೆ ಗುತ್ತಿಗೆ ನೀಡಲಾಗಿದ್ದು, ಹಲವು ಕಾರ್ಮಿಕರು, ಚೆಸ್ಕಾಂ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ೧೧ ಕೆವಿ ವಿದ್ಯುತ್ ಮಾರ್ಗಗಳಲ್ಲಿ ಹಳೆಯ ವಿದ್ಯುತ್ ತಂತಿಗಳನ್ನು ಕರ‍್ಡ್ ಕಂಡಕ್ಟರ್‌ನಿAದ ಬಲವರ್ಧನೆಗೊಳಿಸಲಾಗುತ್ತಿದೆ. ೫೩೬ ಕಿ.ಮೀ. ಪೈಕಿ ಈಗಾಗಲೇ ೧೮೩ ಕಿ.ಮೀ ನಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಹೆದ್ದಾರಿ, ಮುಖ್ಯ ರಸ್ತೆ ಪಕ್ಕದಲ್ಲಿರುವ ಹೆಚ್.ಟಿ. ಮಾರ್ಗಗಳ ಹಳೆ ವಿದ್ಯುತ್ ತಂತಿಗಳನ್ನು ಬದಲಿಸಿ ಮರುಸ್ಥಾಪಿಸಲಾಗುತ್ತಿದ್ದು, ಅಂದಾಜು ೧೮೦ ಕಿ.ಮೀ. ಪೈಕಿ ೪೯ ಕಿ.ಮೀ. ಕಾಮಗಾರಿ ಮುಕ್ತಾಯಗೊಂಡಿದೆ. ಉತ್ತಮ ವೋಲ್ಟೇಜ್‌ನೊಂದಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅವಶ್ಯವಿರುವ ಕಡೆ ಹೆಚ್ಚು ಪರಿವರ್ತಕಗಳನ್ನು ಅಳವಡಿಸಲಾಗುತ್ತಿದ್ದು, ೪೯೭ ಪೈಕಿ ೩೩ ಕಡೆಗಳಲ್ಲಿ ಇದನ್ನು ಅಳವಡಿಸಿ ಸಂಪರ್ಕ ನೀಡಲಾಗಿದೆ.

ವಿದ್ಯುತ್ ಅಪಘಾತ ತಪ್ಪಿಸಲು ಎಲ್.ಟಿ. ವಿದ್ಯುತ್ ಮಾರ್ಗಗಳಲ್ಲಿನ ವಿದ್ಯುತ್ ತಂತಿಗಳನ್ನು ಎಬಿ ಕೇಬಲ್ ಬಳಸಿ ಬಲವರ್ಧನೆ ಮಾಡಲಾಗುತ್ತಿದ್ದು, ೨೬ ಕಿ.ಮೀ. ಪೈಕಿ ೪.೨೨ ಕಿ.ಮೀ.ನಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ೫ ಸಾವಿರ ಕಬ್ಬಿಣದ ವಿದ್ಯುತ್ ಕಂಬಗಳನ್ನು ಬದಲಾಯಿಸುವುದು, ತೋಟ, ಅರಣ್ಯ ಪ್ರದೇಶದಲ್ಲಿರುವ ಕಂಬಗಳ ಸ್ಥಳಾಂತರ ಸೇರಿ ಅನೇಕ ಕಾಮಗಾರಿಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿವೆ.

ನಮ್ಮ ಮನವಿಗೆ ಕೊಡಗಿನವರೇ ಆದ ಇಂಧನ ಸಚಿವ ಕೆ.ಜೆ. ಜಾರ್ಜ್ ಪೂರಕವಾಗಿ ಸ್ಪಂದಿಸಿ ರೂ. ೨೨೬ ಕೋಟಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಎದುರಾಗುವ ವಿದ್ಯುತ್ ಅಡಚಣೆ ಬಹುತೇಕ ಪ್ರಮಾಣದಲ್ಲಿ ಪರಿಹಾರವಾಗಲಿದೆ. ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು, ಮುಂದಿನ ಜನವರಿ, ಫೆಬ್ರವರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಗುಣಮಟ್ಟ ಕಾಮಗಾರಿಗೆ ಆದ್ಯತೆ ನೀಡಲಾಗುತ್ತಿದ್ದು, ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಿ ಭವಿಷ್ಯದಲ್ಲಿಯೂ ಯಾವುದೇ ತೊಂದರೆಗಳು ಆಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ.

- ಎ.ಎಸ್. ಪೊನ್ನಣ್ಣ, ಮುಖ್ಯಮಂತ್ರಿ ಕಾನೂನು ಸಲಹೆಗಾರರು, ಶಾಸಕರು, ವೀರಾಜಪೇಟೆ ಕ್ಷೇತ್ರ

ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆಯನ್ನು ಅಭಿವೃದ್ಧಿಗೊಳಿಸಿ ಬಲವರ್ಧನೆಗೊಳಿಸಲು ಈ ಯೋಜನೆ ಪೂರಕವಾಗಿದೆ. ಬಹುಕಾಲದ ಬೇಡಿಕೆಗೆ ಮನ್ನಣೆ ನೀಡಿ ಸರಕಾರ ಅನುದಾನ ಬಿಡುಗಡೆಗೊಳಿಸಿದೆ. ಕಾಮಗಾರಿಯೂ ಚುರುಕಿನಿಂದ ನಡೆಯುತ್ತಿದೆ. ಇದರಿಂದ ಗುಣಮಟ್ಟದ ವಿದ್ಯುತ್ ಸರಬರಾಜಾಗಲಿದೆ.

- ಡಾ. ಮಂತರ್ ಗೌಡ, ಶಾಸಕರು, ಮಡಿಕೇರಿ ಕ್ಷೇತ್ರ

ಕಾಮಗಾರಿ ಕೈಗೆತ್ತಿಕೊಂಡು ಚುರುಕಿನಿಂದ ನಡೆಸಲಾಗುತ್ತಿದೆ. ೩ ಏಜೆನ್ಸಿಗಳಿಗೆ ಗುತ್ತಿಗೆ ವಹಿಸಲಾಗಿದೆ. ಇಲಾಖೆ ನಿರಂತರವಾಗಿ ಮೇಲ್ವಿಚಾರಣೆ ನಡೆಸಿ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ಕಾಮಗಾರಿ ನಡೆದಿದ್ದು, ಕೆಲವೆಡೆ ಮುಕ್ತಾಯವಾಗಿದೆ. ಈ ಯೋಜನೆಯಿಂದ ಮಳೆಗಾಲದಲ್ಲಿ ಆಗುವ ವಿದ್ಯುತ್ ಅಡಚಣೆಗೆ ಪರಿಹಾರ ದೊರೆಯುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿ ಕೆಲಸ ಮಾಡುತ್ತಿದ್ದು, ಪರಿಕರಗಳು ಬಹುವರ್ಷಗಳು ಉಪಯೋಗಕ್ಕೆ ಬರುತ್ತವೆ.

- ಎಂ. ರಾಮಚಂದ್ರ, ಕಾರ್ಯನಿರ್ವಾಹಕ ಅಭಿಯಂತರ, ಚೆಸ್ಕಾಂ