ಸೋಮವಾರಪೇಟೆ, ಜೂ. ೨೮: ಭಾರೀ ಮಳೆಯಿಂದಾಗಿ ಬರೆಕುಸಿತ ಉಂಟಾಗಿ ಸಂಚಾರಕ್ಕೆ ಅಡಚಣೆಯಾಗಿದ್ದ ಕುಂದಳ್ಳಿ - ಪುಷ್ಪಗಿರಿ ರಸ್ತೆಯ ದುರಸ್ತಿಕಾರ್ಯ ಪೂರ್ಣಗೊಂಡಿದೆ. ಇದರೊಂದಿಗೆ ನೂತನ ವಿದ್ಯುತ್ ಕಂಬ ಅಳವಡಿಸಿ ವಿದ್ಯುತ್ ಮಾರ್ಗ ಸರಿಪಡಿಸಲಾಗಿದೆ. ಶಾಂತಳ್ಳಿ ಹೋಬಳಿಯ ಕುಮಾರಳ್ಳಿ ಬಾಚಳ್ಳಿ ಗ್ರಾಮದ ಕುಂದಳ್ಳಿ - ಪುಷ್ಪಗಿರಿ ಸಂಪರ್ಕಿಸುವ ರಸ್ತೆಯ ಮೇಲೆ ನಿನ್ನೆ ಬರೆ ಕುಸಿದು ವಿದ್ಯುತ್ ಕಂಬ ಮುರಿದು ಹೋಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇಂದು ಮಣ್ಣು ತೆರವುಗೊಳಿಸಿ, ನೂತನ ವಿದ್ಯುತ್ ಕಂಬ ಅಳವಡಿಸಲಾಗಿದ್ದು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಹಾಗೂ ವಾಹನಗಳ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಲಾಗಿದೆ.