ಸಿದ್ದಾಪುರ, ಜೂ. ೨೮: ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಪ್ರವಾಹದ ನೀರು ನುಗ್ಗಿ ನೆಲ್ಲಿಹುದಿಕೇರಿ ಗ್ರಾಮದ ನದಿ ತೀರದ ಕುಂಬಾರ ಗುಂಡಿ ನಿವಾಸಿ ಅಕ್ಕಣ್ಣಿ ಎಂಬವರಿಗೆ ಸಮಸ್ಯೆ ಎದುರಾಗಿತ್ತು. ಇವರನ್ನು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ಅಕ್ಕಣ್ಣಿ ಕುಟುಂಬಕ್ಕೆ ಕಂದಾಯ ಇಲಾಖೆ ವತಿಯಿಂದ ಆಹಾರ ವಸ್ತುಗಳ ಕಿಟ್ ಅನ್ನು ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ಗ್ರಾಮ ಆಡಳಿತ ಅಧಿಕಾರಿ ಸಚಿನ್ ಕುಲಕರ್ಣಿ ವಿತರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.