ಸೋಮವಾರಪೇಟೆ, ಜೂ. ೨೭: ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯಗಳಿಂದ ಸಮಾಜದಲ್ಲಿ ಜನಮನ್ನಣೆ ಗಳಿಸಿದೆ. ಸರ್ಕಾರಗಳು ಮಾಡುವ ಕಾರ್ಯಗಳನ್ನು ಸಂಸ್ಥೆ ಮಾಡುತ್ತಿದೆ ಎಂದು ಶಾಸಕ ಡಾ. ಮಂತರ್ ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ರೋಟರಿ ಭವನದಲ್ಲಿ ಆಯೋಜಿಸಿದ್ದ ಮುಂದಿನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮೂಲಕ ರೋಟರಿ ಸಂಸ್ಥೆಯು ಮಾದರಿಯಾಗಿದೆ. ಮುಂದೆಯೂ ರೋಟರಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. ಇದೇ ಸಂದರ್ಭ ಗೌರವ ಸದಸ್ಯರಾಗಿ ಮಂತರ್ ಅವರನ್ನು ರೋಟರಿಗೆ ಸೇರ್ಪಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸೋಮವಾರ ಪೇಟೆ ರೋಟರಿ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಹಿಳಾ ಅಧ್ಯಕ್ಷೆಯಾಗಿ ವೀಣಾ ಮನೋಹರ್ ನಿಯೋಜನೆಗೊಂಡಿದ್ದು, ಕಾರ್ಯದರ್ಶಿಯಾಗಿ ಡಿ.ಪಿ. ರಮೇಶ್ ಅವರುಗಳು ಅಧಿಕಾರ ಸ್ವೀಕರಿಸಿದರು. ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಅವರು ಪದಗ್ರಹಣ ನೆರವೇರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ನಿರ್ಗಮಿತ ಅಧ್ಯಕ್ಷ ಜೆ.ಕೆ. ಪೊನ್ನಪ್ಪ, ಕಾರ್ಯದರ್ಶಿ ಬಿದ್ದಪ್ಪ, ಸಹಾಯಕ ಗವರ್ನರ್ ಡಾ. ಹರಿ ಎ. ಶೆಟ್ಟಿ, ಉಲ್ಲಾಸ್ ಕೃಷ್ಣ, ವಲಯ ಸೇನಾನಿ ಪ್ರಕಾಶ್‌ಕುಮಾರ್, ರಾಕೇಶ್ ಪಟೇಲ್, ಪಿ.ಕೆ. ರವಿ, ಸುಂದರ್, ಜಿ.ಡಿ. ನವೀನ್, ಬಿ.ಎಂ. ಸುರೇಶ್ ಸೇರಿದಂತೆ ಇತರರು ಇದ್ದರು.