ಕುಶಾಲನಗರ, ಜೂ. ೨೭: ವಿದ್ಯಾರ್ಥಿಗಳು ಪ್ರಾಥಮಿಕ, ಪ್ರೌಢ ಶಿಕ್ಷಣದಲ್ಲಿಯೇ ಕನ್ನಡದ ಬಗ್ಗೆ ಅರಿಯಬೇಕು. ಕನ್ನಡ ಓದುವುದು, ಬರೆಯುವುದು ಹಾಗೂ ಮಾತನಾಡುವ ಅಭ್ಯಾಸ ಮಾಡಿದಾಗ ಮಾತ್ರ ಕನ್ನಡ ಭಾಷೆಯನ್ನು ಉಳಿಸಿ, ಬೆಳೆÀಸಲು ಸಾಧ್ಯವಾಗುತ್ತದೆ ಎಂದು ಅನುಗ್ರಹ ಕಾಲೇಜಿನ ಉಪನ್ಯಾಸಕಿ ಲೀಲಾ ಕುಮಾರಿ ತೊಡಿಕಾನ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಲ್ಲಿನ ಪಾತಿಮಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸೂದನ ರಾಘವಯ್ಯ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಕನ್ನಡಕ್ಕೆ ಆದ್ಯತೆ ಸಿಗಬೇಕು. ಮಕ್ಕಳಲ್ಲಿ ಕನ್ನಡದ ಬಗ್ಗೆ ಯಾವುದೇ ತಾತ್ಸಾರ ಭಾವನೆ ಮೂಡದ ಹಾಗೆ ವಾತಾವರಣ ನಿರ್ಮಾಣವಾಗಬೇಕು. ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಅದನ್ನು ಬೆಳೆಸುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ನಾಗೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವ ಮಕ್ಕಳಲ್ಲಿ ಕನ್ನಡ ಪ್ರೇಮ ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ. ಈಗ ಇಲ್ಲಿರುವ ವಿದ್ಯಾರ್ಥಿಗಳು ಮುಂದಿನ ವರ್ಷದಲ್ಲಿ ಈ ರೀತಿಯ ಗೌರವ ಪಡೆಯಲು ಪೈಪೋಟಿಗೆ ಬರಬೇಕು ಎಂದು ಹೇಳಿದರು. ಫಾತಿಮಾ ಕಾನ್ವೆಂಟ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಚೇತನಾ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯುವ ಮೂಲಕ ಕನ್ನಡದÀ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭ ಕಸಾಪ ಕಾರ್ಯದರ್ಶಿ ಎಸ್. ನಾಗರಾಜ್, ಖಜಾಂಚಿ ಕೆ.ವಿ. ಉಮೇಶ್, ನಿರ್ದೇಶಕರಾದ ಬಿ.ಸಿ. ದಿನೇಶ್, ಎಂ.ಎನ್. ಕಾಳಪ್ಪ, ಸೂದನ ರತ್ನಾವತಿ, ಹೆಬ್ಬಾಲೆ ಹೋಬಳಿ ಕಸಾಪ ಅಧ್ಯಕ್ಷ ಎಂ.ಎನ್. ಮೂರ್ತಿ, ಕಾರ್ಯದರ್ಶಿ ಸುಬ್ರಮಣ್ಯ, ಪಾತಿಮಾ ಶಾಲೆಯ ಶಿಕ್ಷಕರಾದ ಸಂತೋಷ್, ಮಂಜುಳಾ ಪಾಲ್ಗೊಂಡಿದ್ದರು. ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಅಧಿಯಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.