ಮಡಿಕೇರಿ, ಜೂ. ೨೮: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಅಂಗನವಾಡಿ, ಶಾಲೆ, ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯ ಕಟ್ಟಡಗಳ ಸುಸ್ಥಿತಿ ಬಗ್ಗೆ ೧೦ ದಿನದೊಳಗೆ ಲಿಖಿತ ವರದಿ ನೀಡುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜು ಅವರು ಸೂಚಿಸಿದ್ದಾರೆ. ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿ ಅವರ ಪಿಡಿ ಖಾತೆಯಲ್ಲಿ ೩೭ ಕೋಟಿ ಹಣವಿದೆ. ಹಾಗೆಯೇ ತಹಶೀಲ್ದಾರರ ಬಳಿ ೨ ಕೋಟಿ ಹಣ ಇದೆ. ಮನೆ ಮತ್ತಿತರ ಹಾನಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಮಳೆ ಹಾನಿ ಬಗ್ಗೆ ಗುರುವಾರ ಮಾಹಿತಿ ಪಡೆದು ಸಚಿವರು ಮಾತನಾಡಿದರು. ಜಿಲ್ಲೆಯಲ್ಲಿ ಇನ್ನೂ ೪೦ ದಿನಗಳ ಕಾಲ ಹೆಚ್ಚಿನ ಎಚ್ಚರ ವಹಿಸಬೇಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು. ಅಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯ ಸ್ಥಳಕ್ಕೆ ಆಗಾಗ ಭೇಟಿ ನೀಡಬೇಕು. ಇದರಿಂದ ಸಮಸ್ಯೆ ಇದ್ದಲ್ಲಿ ಪರಿಹರಿಸಲು ಸಾಧ್ಯ ಎಂದರು.
ಮುಂದಿನ ದಿನಗಳಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಗಮನಹರಿಸಬೇಕು. ದೂರು ಬಾರದಂತೆ ಮುನ್ನೆಚ್ಚರ ವಹಿಸುವುದು ಅತ್ಯಗತ್ಯ ಎಂದು ಎನ್.ಎಸ್. ಭೋಸರಾಜು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಕಳೆದ ಬಾರಿ ಗ್ರಾ.ಪಂ.ಗಳಿಗೂ ಹಣ ನೀಡಲಾಗಿತ್ತು, ಈ ಬಾರಿಯೂ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಕಳೆದ ಮೇ ಕೊನೆ ವಾರದಿಂದ ಸುರಿದ ವ್ಯಾಪಕ ಮಳೆಗೆ ವಿದ್ಯುತ್, ರಸ್ತೆ, ಸೇತುವೆ, ಮನೆ ಸೇರಿದಂತೆ ವಿವಿಧ ರೀತಿಯ ಹಾನಿಗಳಾಗಿದ್ದು, ವಿದ್ಯುತ್ ವ್ಯತ್ಯಯವನ್ನು ಆಯಾಯ ಸಂದರ್ಭದಲ್ಲಿಯೇ ಸರಿಪಡಿಸು ವಂತಾಗಬೇಕು. ಆ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿರಬೇಕು ಎಂದು ಸಚಿವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ. ಮಂತರ್ ಗೌಡ ಅವರು ಮಳೆಗಾಲದಲ್ಲಿ ಕರ್ತವ್ಯ ನಿರ್ವಹಿಸುವ ಲೈನ್ ಮ್ಯಾನ್ ಹಾಗೂ ಗ್ಯಾಂಗ್‌ಮ್ಯನ್‌ಗಳಿಗೆ ರೈನ್ ಕೋಟ್ ಸೇರಿದಂತೆ ಅಗತ್ಯ ಉಪಕರಣ ನೀಡಬೇಕು. ಜೊತೆಗೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಾಕೀತು ಮಾಡಿದರು.
ರಾತ್ರಿ ವೇಳೆ ಮಡಿಕೇರಿ ನಗರದಲ್ಲಿ ೮ ಗಂಟೆಯಾದರೂ ವಿದ್ಯುತ್ ಪೂರೈಕೆ ಇಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸುವಂತೆ ಶಾಸಕರು ಸೂಚಿಸಿದರು.
ಲೋಕೋಪಯೋಗಿ, ಗ್ರಾಮೀಣ ರಸ್ತೆ ಸರಿಪಡಿಸುವಂತಾಗಬೇಕು. ಸಾರಿಗೆ ಸಂಚಾರಕ್ಕೆ ಯಾವುದೇ ರೀತಿ ವ್ಯತ್ಯಯ ಆಗದಂತೆ ಗಮನಹರಿಸುವಂತೆ ಶಾಸಕರು ನಿರ್ದೇಶನ ನೀಡಿದರು.
ಮಳೆಗಾಲದಲ್ಲಿಯೂ ಪ್ರವಾಸಿಗರು ಜಿಲ್ಲೆಗೆ ಹೆಚ್ವಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆದ್ದರಿಂದ ಪ್ರವಾಸಿ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು. ಜತೆಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.
ಜಿ.ಪಂ. ಸಿಇಓ ಆನಂದ್ ಪ್ರಕಾಶ್ ಮೀನಾ, ಹೆಚ್ವುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ವಿವಿಧ ಇಲಾಖೆ ಅಧಿಕಾರಿಗಳು ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.