ಸಿದ್ದಾಪುರ, ಜೂ. ೨೧: ಬಾಡಗ ಬಾಣಂಗಾಲ ಗ್ರಾಮದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಹುಲಿ ಕಾಡಿಗೆ ತೆರಳಿದೆ ಎಂದು ಹೆಜ್ಜೆ ಗುರುತುಗಳ ಆಧಾರದಲ್ಲಿ ಅರಣ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಗ್ರಾಮದ ವ್ಯಾಪ್ತಿಯಲ್ಲಿ ಹುಲಿ ಕಾಫಿ ತೋಟದೊಳಗೆ ಬೀಡು ಬಿಟ್ಟು ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದ ಘಟನೆಗಳು ನಡೆದಿದ್ದವು. ನಂತರ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡ ಸಂದರ್ಭ ಹುಲಿ ಕಾಡಿನತ್ತ ತೆರಳಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಹುಲಿಯೂ ನಿರಂತರವಾಗಿ ಕಾಫಿ ತೋಟಗಳಲ್ಲಿ ಪ್ರತ್ಯಕ್ಷಗೊಂಡು ಹೆಜ್ಜೆ ಗುರುತುಗಳು ಕಂಡುಬAದಿದ್ದವು. ಕಳೆದೆರಡು ದಿನಗಳಿಂದ ಬಾಡಗ ಬಾಣಂಗಾಲ ಗ್ರಾಮದ ಕಾಫಿ ಬೆಳೆಗಾರ ಸಿ.ಟಿ. ಪೊನ್ನಪ್ಪ ಎಂಬವರ ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಪತ್ತೆಯಾದ ಹಿನ್ನೆಲೆಯಲ್ಲಿ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

ಹಗಲಿರುಳು ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಹುಲಿಯು ಖಾಸಗಿ ಸಂಸ್ಥೆಗಳ ಕಾಫಿ ತೋಟದ ಮೂಲಕ ಅರಣ್ಯದತ್ತ ತೆರಳಿರುವ ಹೆಜ್ಜೆ ಗುರುತುಗಳು ಕಾರ್ಯಾಚರಣೆ ತಂಡಕ್ಕೆ ಲಭಿಸಿದೆ. ಮುಂದಿನ ದಿನಗಳಲ್ಲಿ ಹುಲಿಯು ಮತ್ತೆ ಕಂಡುಬAದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದಾಗಿ ಉಪವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ. ತಿಳಿಸಿದ್ದಾರೆ.