ಮಡಿಕೇರಿ, ಜೂ. ೨೧ : ಮಡಿಕೇರಿಯ ಮುಂಜಾನೆ ಬ್ಯಾಡ್ಮಿಂಟನ್ ಆಟಗಾರರ ತಂಡ ಆಯೋಜಿಸಿದ್ದ ಗುಡ್ಮಿಂಟನ್ ಪ್ರೀಮಿಯರ್ ಲೀಗ್-೨೦೨೫ ಸ್ಪರ್ಧೆಯಲ್ಲಿ ಸುಂಟಿಕೊಪ್ಪ ಸೂಪರ್ ಕಿಂಗ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಮಡಿಕೇರಿ ರಾಯಲ್ ಚಾಲೆಂಜ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಚೆಟ್ಟಿಮಾನಿ ಡೇರ್ ಡೆವಿಲ್ ತಂಡ ಮೂರನೇ ಸ್ಥಾನ ಹಾಗೂ ಭಾಗಮಂಡಲ ನೈಟ್ ರೈಡರ್ಸ್ ತಂಡ ನಾಲ್ಕನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಶ್ರೇಷ್ಠ ಆಟಗಾರಾಗಿ ಅರುಣ್ ಕುಮಾರ್ ಪ್ರಶಸ್ತಿ ಪಡೆದುಕೊಂಡರು. ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳ ಒಟ್ಟು ೨೪ ಆಟಗಾರರು ಸ್ಪರ್ಧಿಸಿದ್ದರು.
ಸಮಾರೋಪ ಸಮಾರಂಭ: ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಕೊಡವ ವೆಲ್ ಫೇರ್ ಆ್ಯಂಡ್ ರಿಕ್ರಿಯೇಷನ್ ಅಸೋಸಿಯೇಷನ್ನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಬ್ಯಾಡ್ಮಿಂಟನ್ ಆಟದ ಮಹತ್ವವನ್ನು ಹಂಚಿಕೊAಡರು. ಕ್ರೀಡೆ ದೈಹಿಕ ಆರೋಗ್ಯ, ಮಾನಸಿಕ ಶಾಂತಿ ಮತ್ತು ಸಾಮಾಜಿಕ ಸಂಬAಧಗಳನ್ನು ಬೆಳೆಸುವಲ್ಲಿ ಸಹಾಯವಾಗುತ್ತದೆ ಎಂದು ಹೇಳಿದರು.
ಡಾ. ಕೋಲೆಯಂಡ ಮೊಹನ್ ಅಪ್ಪಾಜಿ ಅವರು ಮಾತನಾಡಿ, ಇತರ ಆಟಗಾರರನ್ನು ಆಹ್ವಾನಿಸಿ ಮತ್ತಷ್ಟು ಪಂದ್ಯಾವಳಿಗಳನ್ನು ಆಯೋಜಿಸುವಂತಾಗಬೇಕು ಎಂದರು. ಡಾ. ಚೌರೀರ ಶ್ಯಾಮ್ ಅಪ್ಪಣ್ಣ ಅವರು ಮಾತನಾಡಿ, ಕ್ರೀಡೆಯ ಅವಶ್ಯಕತೆ ಮತ್ತು ಆಟದ ವೇಳೆ ಪಾಲಿಸಬೇಕಾದ ಕ್ರಮದ ಕುರಿತು ಮಾಹಿತಿ ನೀಡಿದರು.
ಪ್ರಮುಖರಾದ ಗುಡ್ಡಂಡ್ರ ಪವನ್ ಹಾಗೂ ಶಮ್ಮಿ ಸುಬ್ಬಯ್ಯ ಉಪಸ್ಥಿತರಿದ್ದರು. ೩೦ಕ್ಕೂ ಹೆಚ್ಚು ಆಟಗಾರರು ಪಾಲ್ಗೊಂಡಿದ್ದ ಕಾರ್ಯಕ್ರಮವನ್ನು ಕೆದಂಬಾಡಿ ಕವಿ ಪ್ರಸಾದ್ ನಿರ್ವಹಿಸಿದರು.