ಮಡಿಕೇರಿ, ಜೂ. ೨೦: ಮಿಲಿಟರಿ ಹೆಸರಲ್ಲಿ ನಕಲಿ ಮದ್ಯ ಬರುತ್ತಿದ್ದಲ್ಲಿ ಅದನ್ನು ತಡೆಗಟ್ಟುವ ಜವಾಬ್ದಾರಿ ಅಬಕಾರಿ ಇಲಾಖೆಯದ್ದಾಗಿದ್ದು, ಈ ಬಗ್ಗೆ ಕ್ರಮವಹಿಸಲಿ. ಆದರೆ, ಮಾಜಿ ಸೈನಿಕರು ಅವಲಂಬಿತರಿಗೆ ಕ್ಯಾಂಟೀನ್ ಮೂಲಕ ಸೌಲಭ್ಯಕ್ಕೆ ತೊಂದರೆ ಉಂಟುಮಾಡಬಾರದು ಎಂದು ಜಿಲ್ಲಾ ಮಾಜಿ ಸೈನಿಕರ ಸಂಘ ಆಗ್ರಹಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಹಾಗೂ ಕಾರ್ಯದರ್ಶಿ ನಿವೃತ್ತ ಮೇಜರ್ ಓಡಿಯಂಡ ಎಸ್. ಚಿಂಗಪ್ಪ ಅವರುಗಳು ಜಿಲ್ಲೆಯಲ್ಲಿ ಸುಮಾರು ೮ ಸಾವಿರಕ್ಕೂ ಅಧಿಕ ಮಾಜಿ ಸೈನಿಕರು ಹಾಗೂ ಅವಲಂಬಿತರಿದ್ದಾರೆ. ಇವರುಗಳು ಹಾಗೂ ಅವಲಂಬಿತರ ಸಭೆ - ಸಮಾರಂಭಗಳಲ್ಲಿ ಮಿಲಿಟರಿ ಮದ್ಯ ಬಳಕೆ ಗಂಭೀರ ವಿಚಾರವಲ್ಲ. ಇದಕ್ಕೆ ತೊಂದರೆ ನೀಡಬಾರದು, ಆದರೆ ಮಿಲಿಟರಿ ಹೆಸರಲ್ಲಿ ನಕಲಿ ಮದ್ಯವನ್ನು ಸರಬರಾಜು ಮಾಡುವ ವಿಚಾರಗಳಿದ್ದಲ್ಲಿ ಇಲಾಖೆ ಕ್ರಮವಹಿಸಬೇಕು ಎಂದಿದ್ದಾರೆ. ಒಬ್ಬ ಮಾಜಿ ಅಧಿಕಾರಿ, ಸೈನಿಕ ತಮಗೆ ಸಿಗುವ ಮದ್ಯವನ್ನು ಅವರೇ ಕುಡಿಯಬೇಕು ಎಂಬದನ್ನು ಒಪ್ಪಲಾಗದು. ಅವಲಂಬಿತರು, ಸ್ವಂತ ಸಂಬAಧಿಗಳಿಗೆ ನೀಡುವದು ತಪ್ಪಾಗಲಾರದು ಎಂದು ಅವರು ಹೇಳಿದ್ದಾರೆ.

ಆದರೆ ಮಾಜಿ ಸೈನಿಕರು ತಮ್ಮ ಸೌಲಭ್ಯದ ಮದ್ಯವನ್ನು ಮಾರಾಟಮಾಡಬಾರದು. ಇಂತಹ ಪ್ರಕರಣಗಳಿದ್ದಲ್ಲೂ ಕ್ರಮವಹಿಸಲಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮಾಜಿ ಸೈನಿಕರಲ್ಲೂ ಸಂಘ ಮನವಿ ಮಾಡುವುದಾಗಿ ಅವರುಗಳು ತಿಳಿಸಿದ್ದಾರೆ.

ಸಂಘದ ಸಭೆ

ಸಂಘದ ಸಭೆ ಇತ್ತೀಚೆಗೆ ಮಡಿಕೇರಿಯ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಬಿ.ಎ. ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮುಖ್ಯವಾಗಿ ಸೈನಿಕರ ಕುಂದುಕೊರತೆಗಳ ಬಗ್ಗೆ ಸೈನಿಕರ ಅದಾಲತ್ ನಡೆಯದಿರುವ ಬಗ್ಗೆ ಆಕ್ಷೇಪಿಸಿ ತ್ವರಿತವಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಅದಾಲತ್ ನಡೆಸಲು ಆಗ್ರಹಿಸಲಾಯಿತು. ಸಂಘದ ಚಟುವಟಿಕೆಗೆ ಅನುಕೂಲವಾಗುವಂತೆ ಸಮುದಾಯ ಭವನದ ಬೇಡಿಕೆ, ಜಾಗದ ವಿಚಾರದ ಬಗ್ಗೆ ಚರ್ಚಿಸಲಾಯಿತು. ಮಿಲಿಟರಿ ಕ್ಯಾಂಟೀನ್‌ನಲ್ಲಿನ ಮದ್ಯಕ್ಕೆ ತೆರಿಗೆ ವಿಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದನ್ನು ಸಭೆಯಲ್ಲಿ ಸ್ವಾಗತಿಸಲಾಯಿತು. ಮಾಜಿ ಸೈನಿಕರು, ಅವಲಂಬಿತರು ಸಂಘದ ಸದಸ್ಯತ್ವ ಪಡೆದುಕೊಳ್ಳುವುದು, ಇಸಿಎಚ್‌ಎಸ್‌ನ ಸೌಲಭ್ಯ ಪಡೆದುಕೊಳ್ಳಲು ಸೂಚಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಏರ್ ಕಮಾಂಡರ್ (ನಿ) ದೇವಯ್ಯ, ಲೆ.ಕ. ನಾಚಪ್ಪ, ಸುಬೇದಾರ್ ಮೇಜರ್ ವಾಸಪ್ಪ, ಸೋಮಯ್ಯ, ಮಾದಪ್ಪ ಮತ್ತಿತರ ಪದಾಧಿಕಾರಿಗಳು ಸೇರಿದಂತೆ ಜಿಲ್ಲೆಯ ೯ ಸಂಘಗಳ ಅಧ್ಯಕ್ಷರುಗಳು ಪಾಲ್ಗೊಂಡಿದ್ದರು ಎಂದು ಕಾರ್ಯದರ್ಶಿ ಚಿಂಗಪ್ಪ ಅವರು ಮಾಹಿತಿ ನೀಡಿದ್ದಾರೆ.