ಸೋಮವಾರಪೇಟೆ, ಜೂ.೨೦ : ಇಲ್ಲಿನ ಪಟ್ಟಣ ಪಂಚಾಯಿತಿಯ ಉದ್ದಿಮೆ ನಿಧಿಯಡಿ ರೂ. ೮೦ ಲಕ್ಷ ವೆಚ್ಚದಲ್ಲಿ ಪೇ ಪಾರ್ಕಿಂಗ್ ಯೋಜನೆ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ ಎಂದು ಪ.ಪಂ. ಅಧ್ಯಕ್ಷೆ ಜಯಂತಿ ಶಿವಕುಮಾರ್ ಹೇಳಿದರು.

ಪ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನ ನಿಲುಗಡೆ ಸಮಸ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆ ಹಿಂದೆ ಇದ್ದ ಮಾರ್ಕೆಟ್ ಏರಿಯಾದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗುವುದು. ಪಟ್ಟಣ ಪಂಚಾಯಿತಿಯ ಉದ್ದಿಮೆ ನಿಧಿಯಡಿ ರೂ. ೮೦ ಲಕ್ಷ ವೆಚ್ಚದಲ್ಲಿ ಪೇ ಪಾರ್ಕಿಂಗ್ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.

ಈ ಯೋಜನೆಗೆ ಜಿಲ್ಲಾಧಿಕಾರಿಗಳು ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ತಾಂತ್ರಿಕ ಅನುಮೋದನೆಯ ನಂತರ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಪೇ ಪಾರ್ಕಿಂಗ್‌ನಿAದಾಗಿ ವಾಹನಗಳ ನಿಲುಗಡೆ ಸಮಸ್ಯೆ ದೂರಾಗುವ ನಿರೀಕ್ಷೆಯಿದೆ ಎಂದರು. ಸದಸ್ಯ ಬಿ.ಸಿ. ವೆಂಕಟೇಶ್ ಅವರು ಪಟ್ಟಣದ ಪಾರ್ಕಿಂಗ್ ಅವ್ಯವಸ್ಥೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅಧ್ಯಕ್ಷರು ಮೇಲಿನ ಉತ್ತರ ನೀಡಿದರು.

(ಮೊದಲ ಪುಟದಿಂದ) ಇದರೊಂದಿಗೆ ೨೫ ಲಕ್ಷದಲ್ಲಿ ಪಂಚಾಯಿತಿಗೆ ಸೇರಿದ ಮಳಿಗೆಗಳ ದುರಸ್ತಿಗೆ ಕ್ರಮ ವಹಿಸಲಾಗಿದೆ ಎಂದು ಜಯಂತಿ ಶಿವಕುಮಾರ್ ಮಾಹಿತಿ ನೀಡಿದರು.

ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆಗೊಳಿಸಲಾಗುತ್ತಿದೆ. ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ಹೆಚ್ಚು ನಿಲುಗಡೆಯಾಗುತ್ತಿವೆ. ಎಲ್ಲಾ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸುತ್ತಿದ್ದರೂ, ಪೊಲೀಸರು ಕ್ರಮವಹಿಸಿಲ್ಲ. ಹಲವಷ್ಟು ಬಾರಿ ಮಾಹಿತಿ ನೀಡಿದರೂ ಯಾವುದೇ ಸ್ಪಂದನೆಯಿಲ್ಲ. ವರ್ತಕರ ಸಂಘದವರು ಇದೇ ವಿಚಾರವಾಗಿ ಪ.ಪಂ. ವಿರುದ್ಧ ಪ್ರತಿಭಟನೆಗೆ ಚಿಂತಿಸುತ್ತಿದ್ದಾರೆ. ಕನಿಷ್ಟ ಹೋಂ ಗಾರ್ಡ್ಗಳನ್ನೂ ಸಹ ನಿಯೋಜಿಸುತ್ತಿಲ್ಲ. ಈ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಬೇಕೆಂದು ಹಿರಿಯ ಸದಸ್ಯ ಬಿ. ಸಂಜೀವ ಸಭೆಯ ಗಮನಕ್ಕೆ ತಂದರು.

ಈ ಬಗ್ಗೆ ಚರ್ಚೆ ನಡೆದು, ಸೋಮವಾರಪೇಟೆ ಪಟ್ಟಣದಲ್ಲಿ ಸುಗಮ ಸಂಚಾರ ಹಾಗೂ ನಿಗದಿತ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಎಸ್.ಪಿ. ಅವರಿಗೆ ದೂರು ನೀಡಲು ಸಭೆ ನಿರ್ಣಯಿಸಿತು.

ಕಳೆದ ವಾರವಷ್ಟೇ ಪಟ್ಟಣ ಸಮೀಪದ ಕಾರೆಕೊಪ್ಪದಲ್ಲಿ ಅಸ್ಸಾಂ ಎಂದು ಹೇಳಿಕೊಳ್ಳುವ ವ್ಯಕ್ತಿಯೋರ್ವ ಸ್ಥಳೀಯ ಕಾರ್ಮಿಕ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾನೆ. ಇವರುಗಳಿಂದ ಸಮಾಜದಲ್ಲಿ ಅಪರಾಧ ಕೃತ್ಯಗಳು ನಡೆಯುತ್ತಿವೆ. ಇದೀಗ ಪಟ್ಟಣದ ಕೆಲವು ವ್ಯಾಪಾರದಲ್ಲಿ ಅಸ್ಸಾಮಿಗರೆಂದು ಹೇಳಿಕೊಳ್ಳುವ ವ್ಯಕ್ತಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಸದಸ್ಯ ಪಿ.ಕೆ. ಚಂದ್ರು ಹೇಳಿದರು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಅಸ್ಸಾಮಿಗರ ಹೆಸರಿನಲ್ಲಿ ಅಕ್ರಮ ನುಸುಳುಕೋರರು ಆಗಮಿಸಿರುವ ಸಂಶಯವಿದೆ. ದಾಖಲೆಗಳನ್ನು ತಿದ್ದುಪಡಿ ಮಾಡಿಕೊಂಡು ಪಟ್ಟಣದ ಅಂಗಡಿ, ಹೊಟೇಲ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಮೂಲ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.

ಪಟ್ಟಣದಲ್ಲಿ ನಡೆಯುತ್ತಿರುವ ಅಮೃತ್-೨ ಯೋಜನೆಯ ಕಾಮಗಾರಿಯಲ್ಲಿ ಅಲ್ಲಲ್ಲಿ ರಸ್ತೆಯನ್ನು ಅಗೆಯಲಾಗಿದೆ. ಗುಂಡಿಗಳನ್ನು ಮುಚ್ಚದೇ ಬಿಟ್ಟಿರುವುದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗಿದೆ. ತಕ್ಷಣ ಗುಂಡಿಗಳನ್ನು ಮುಚ್ಚಬೇಕೆಂದು ಸಂಬAಧಿಸಿದ ಅಭಿಯಂತರ ಪ್ರಸನ್ನ ಅವರಿಗೆ ಸೂಚಿಸಲಾಯಿತು.

ನೆಲಬಾಡಿಗೆ ಇರುವ ಹಲವಷ್ಟು ಅಂಗಡಿಗಳ ಮಾಲೀಕರು ಪಂಚಾಯಿತಿಗೆ ಬಾಡಿಗೆ ಪಾವತಿಸುತ್ತಿಲ್ಲ. ಅಪೊಲೋ ಫಾರ್ಮಸಿ ಪಕ್ಕದಲ್ಲಿರುವ ಅಂಗಡಿಯಲ್ಲಿ ಮಾಲೀಕರು ಯಾರೆಂದೇ ತಿಳಿಯುತ್ತಿಲ್ಲ ಎಂದು ಪಂಚಾಯಿತಿ ಅಧಿಕಾರಿ ಜೀವನ್ ಸಭೆಗೆ ತಿಳಿಸಿದರು. ಅಂತಹ ಅಂಗಡಿಗಳಿಗೆ ಬೀಗ ಜಡಿಯುವಂತೆ ಸದಸ್ಯರು ಸೂಚಿಸಿದರು. ಇಂಜಿನಿಯರ್ ಇಲ್ಲದೇ ಕಾಮಗಾರಿಗಳಿಗೆ ಸಂಬAಧಿಸಿದAತೆ ಸಭೆಯಲ್ಲಿ ಚರ್ಚಿಸಿ ಪ್ರಯೋಜನವಿಲ್ಲ. ಮುಂದಿನ ಸಭೆಗೆ ಇಂಜಿನಿಯರ್ ಕಡ್ಡಾಯವಾಗಿ ಆಗಮಿಸಬೇಕೆಂದು ಸದಸ್ಯೆ ಶೀಲಾ ಡಿಸೋಜ ಸೇರಿದಂತೆ ಇತರರು ಅಭಿಪ್ರಾಯಿಸಿದರು.

ಕರ್ಕಳ್ಳಿಯಲ್ಲಿರುವ ಸಾರ್ವಜನಿಕ ಸ್ಮಶಾನ ಜಾಗವನ್ನು ರಕ್ಷಿಸಬೇಕಿದೆ. ಸ್ಮಶಾನಕ್ಕೆ ತೆರಳುವ ರಸ್ತೆ ಅಭಿವೃದ್ಧಿಯಾಗಬೇಕಿದ್ದು, ಸಿಲಿಕಾನ್ ಚೇಂಬರ್‌ನ್ನು ಸಮರ್ಪಕವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ಮಹೇಶ್ ಸಭೆಯ ಗಮನ ಸೆಳೆದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಹಾಯಧನ ಲಭ್ಯವಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದು ಮುಖ್ಯಾಧಿಕಾರಿ ಸತೀಶ್ ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಮೋಹಿನಿ, ಸದಸ್ಯರುಗಳಾದ ಮೃತ್ಯುಂಜಯ, ನಾಗರತ್ನ, ಶುಭಕರ, ನಾಮನಿರ್ದೇಶಿತ ಸದಸ್ಯರಾದ ಡಿ.ಯು. ಕಿರಣ್, ಹೆಚ್.ಎ. ನಾಗರಾಜು, ಸಿಬ್ಬಂದಿಗಳಾದ ಜಾಸಿಂ ಖಾನ್, ರೂಪಾ, ಭಾವನಾ, ಜೀವನ್ ಸೇರಿದಂತೆ ಇತರರು ಇದ್ದರು.