ಗೋಣಿಕೊಪ್ಪಲು, ಜೂ.೨೦: ಸಮುದಾಯದ ಸಂಸ್ಕೃತಿ, ಆಚಾರ,ವಿಚಾರ ಪದ್ದತಿ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಆ ನಿಟ್ಟಿನಲ್ಲಿ ಸಮುದಾಯದ ಸಂಸ್ಕೃತಿ ಉಳಿಸಲು ಸರ್ಕಾರ ಕಠಿಬದ್ದವಾಗಿದೆ. ಸಣ್ಣ ಸಣ್ಣ ಸಮುದಾಯಗಳಿಗೂ ಸರ್ಕಾರದ ವತಿಯಿಂದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.

ಗೋಣಿಕೊಪ್ಪಲುವಿನಲ್ಲಿ ಹಲವು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅಖಿಲ ಅಮ್ಮಕೊಡವ ಸಮಾಜದ ಕಟ್ಟಡದ ಬಳಿ ರೂ. ೨ ಕೋಟಿ ವೆಚ್ಚದ ತಡೆಗೋಡೆ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿದ ಶಾಸಕ ಪೊನ್ನಣ್ಣ, ಸಣ್ಣ ನೀರಾವರಿ ಇಲಾಖೆ ವತಿಯಿಂದ ೨ ಕೋಟಿ ಅನುದಾನ ಮಂಜೂರು ಮಾಡಲಾಗಿದೆ.

(ಮೊದಲ ಪುಟದಿಂದ) ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು. ಸಮಾಜದವರು ಕಾಮಗಾರಿಯನ್ನು ಆಗಿಂದ್ದಾಗಿಯೇ ಪರಿಶೀಲನೆ ನಡೆಸಬೇಕು. ಸಣ್ಣ ಸಮುದಾಯಗಳ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಅಮ್ಮಕೊಡವ ಸಮಾಜದ ಅಭಿವೃದ್ದಿಗಾಗಿ ೨೦ ಲಕ್ಷದ ಅನುದಾನವನ್ನು ಕೂಡ ಮಂಜೂರು ಮಾಡಲಾಗಿದೆ. ಲಭ್ಯವಾಗಿರುವ ಅನುದಾನವನ್ನು ಸಮಾಜದ ಏಳಿಗೆಗಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪೃಥ್ವಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಉಮೇಶ್ ಕೇಚಮಯ್ಯ ಮಾತನಾಡಿ, ಕಳೆದ ೨೨ ವರ್ಷಗಳ ಹಿಂದೆ ಅಖಿಲ ಅಮ್ಮಕೊಡವ ಸಮಾಜದಿಂದ ಜಾಗ ಖರೀದಿಸಿ ಕಟ್ಟಡ ನಿರ್ಮಿಸಲಾಗಿದೆ.

ಪ್ರತಿ ಮಳೆಗಾಲದ ಸಂದರ್ಭ ಕೀರೆ ಹೊಳೆಯ ನೀರು ಈ ಭಾಗದಲ್ಲಿ ಹರಿದು ಹೋಗುತ್ತಿದ್ದು ಮಳೆಗಾಲದಲ್ಲಿ ತೋಡಿನ ನೀರು ಸಮಾಜದ ಕಟ್ಟಡದ ಆವರಣದಲ್ಲಿ ಬಂದು ನಿಲ್ಲುತ್ತಿದೆ. ಇದರಿಂದ ಕಟ್ಟಡವು ಅಪಾಯದ ಪರಿಸ್ಥಿತಿಗೆ ತಲುಪಿದೆ. ಈ ನಿಟ್ಟಿನಲ್ಲಿ ಹಲವು ದಶಕಗಳಿಂದ ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವಂತೆ ವಿವಿಧ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿತ್ತು ಆದರೆ ಅನುದಾನ ಲಭ್ಯವಾಗಿರಲಿಲ್ಲ.

ಕ್ಷೇತ್ರದ ಶಾಸಕ ಪೊನ್ನಣ್ಣ ಚುನಾವಣಾ ಪೂರ್ಣದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆAದು ಶ್ಲಾಘಿಸಿದರು. ಈ ಸಂದರ್ಭ ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷರಾದ ಬಾನಂಡ ಪ್ರಥ್ವಿ ಹಾಗೂ ಸಮಾಜ ಬಾಂಧವರು ಶಾಸಕ ಪೊನ್ನಣ್ಣನವರನ್ನು ಸನ್ಮಾನಿಸಿ ಗೌರÀವಿಸಲಾಯಿತು.

ಭೂಮಿ ಪೂಜೆ ಸಂದರ್ಭ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಎಂ.ಮAಜುಳ, ಸದಸ್ಯರುಗಳಾದ ಶರತ್‌ಕಾಂತ್, ಎಂ.ಎ.ಅಬ್ಜಲ್, ಸಪೂರ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರಾದ ನಾಮೇರ ಅಂಕಿತ್ ಪೊನ್ನಪ್ಪ, ಸುನೀತ,ಲತೀಫ್, ಸಲೀಂ, ಅಮ್ಮಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್, ನಿರ್ದೇಶಕರುಗಳಾದ ಬಲ್ಯಂಡ ದಿನು, ಬಾನಂಡ ಅಶೋಕ್, ಪುತ್ತಾಮನೆ ರಾಧ ಗಣೇಶ್, ರಾಧಿಕ ದತ್ತು, ಹೆಮ್ಮಚ್ಚಿಮನೆ ಅಶಿತ ಸೇರಿದಂತೆ ಸಣ್ಣ ನೀರಾವರಿ ಇಲಾಖೆಯ ಕುಮಾರಸ್ವಾಮಿ, ಗುತ್ತಿಗೆದಾರರಾದ ನಾಮೇರ ನವೀನ್, ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.