ಕೊಡ್ಲಿಪೇಟೆ, ಜೂ. ೧೯: ರಾಜ್ಯ ಸರಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ ಸಮೀಪದ ಕ್ಯಾತೆ ಗ್ರಾಮದಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ರೂ. ೭ ಕೋಟಿ ವೆಚ್ಚದ ನೂತನ ವಸತಿ ವಿಜ್ಞಾನ ಪಿಯು ಕಾಲೇಜಿನ ಕಟ್ಟಡ ಕಾಮಗಾರಿಗೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸರಕಾರ ವಸತಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ. ಇಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮುತುವರ್ಜಿ ವಹಿಸಬೇಕೆಂದು ಸೂಚಿಸಿದರು.

ಕೊಡಗಿನಲ್ಲಿ ಬೇರೆ ಜಿಲ್ಲೆಗಳಿಗಿಂತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಕಾಲೇಜು ಪ್ರಾರಂಭದಿAದ ಒಂದೇ ಕ್ಯಾಂಪಸ್‌ನಲ್ಲಿ ೬ ರಿಂದ ದ್ವಿತೀಯ ಪಿ.ಯು.ವರೆಗೂ ವಿದ್ಯಾಭ್ಯಾಸ ಮಾಡಲು ಅವಕಾಶ ದೊರೆದಂತಾಗಿದೆ. ಅಬ್ದುಲ್ ಕಲಾಂ ಅವರಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿರುವ ಈ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪುಗೊಂಡು, ಅವರ ಹೆಸರಿಗೆ ಗೌರವ ತರಬೇಕೆಂದು ಕಿವಿಮಾತು ಹೇಳಿದರು.

ಕರ್ನಾಟಕ ವಸತಿ ಮಂಡಳಿಯು ಈ ಕಾಮಗಾರಿಯನ್ನು ನಿರ್ವಹಿಸುತ್ತಿದ್ದು, ಗುತ್ತಿಗೆದಾರರು ಯೋಜನೆ ಮತ್ತು ಅಂದಾಜು ಪಟ್ಟಿಯಂತೆ ಉತ್ತಮವಾಗಿ ಕಾಮಗಾರಿ ನಿರ್ವಹಿಸಬೇಕು. ಪ್ರಾಂಶುಪಾಲರು, ಸಿಬ್ಬಂದಿ ವರ್ಗ, ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು. ಲೋಪದೋಷಗಳು ಕಂಡುಬAದಲ್ಲಿ ತನ್ನ ಗಮನಕ್ಕೆ ತರುವಂತೆ ತಿಳಿಸಿದರು.

ಈ ಸಂದರ್ಭ ಶಾಲೆಯ ಪ್ರಾಂಶುಪಾಲ ಮಹೇಶ್, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಜನಾರ್ಧನ್, ತಾಲೂಕು ಕೆ.ಡಿ.ಪಿ. ಸದಸ್ಯರಾದ ಔರಂಗಜೇಬ್, ವೇದಕುಮಾರ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಫ್, ಪಾವನ, ದೊಡ್ಡಯ್ಯ, ಪ್ರಮುಖರಾದ ಕೆ.ಎಂ. ಲೊಕೇಶ್, ನಿಸಾರ್, ವಹಾಬ್, ಸುಲೈಮಾನ್, ಸಾಬುಜಾನ್, ಮೇದಪ್ಪ, ಗಣೇಶ್, ವೆಂಕಟೇಶ್, ರಫೀಕ್, ಇಂದ್ರೇಶ್, ನಿಖಿಲ್, ವಸತಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಭ್ರಮಲಾ, ಕಿರಿಯ ಅಭಿಯಂತರ ಅಶ್ವಿನ್, ಕೊಡ್ಲಿಪೇಟೆ ಪ್ಯಾಕ್ಸ್ ನಿರ್ದೇಶಕ ತೇಜಕುಮಾರ್ ಸೇರಿದಂತೆ ಇತರರು ಇದ್ದರು.