ಮಡಿಕೇರಿ, ಜೂ. ೧೯: ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಘವಾಗಿ ಖ್ಯಾತಿ ಗಳಿಸಿ ರಾಜ್ಯ ಮಟ್ಟದಲ್ಲಿಯೂ ಮನ್ನಣೆ ಪಡೆದಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ (ಕೆಡಿಸಿಸಿ) ಉದ್ಯೋಗ ಕೊಡಿಸುವುದಾಗಿ ಆಸೆ ಹುಟ್ಟಿಸಿ ಉದ್ಯೋಗ ಆಕಾಂಕ್ಷಿಯಿAದ ರೂ. ೬ ಲಕ್ಷ ನಗದು ಪಡೆದು ವಂಚನೆ ಮಾಡಿದ ಆರೋಪದಡಿ ಬ್ಯಾಂಕ್‌ನ ಮಾಜಿ ನೌಕರನ ವಿರುದ್ಧ ಪ್ರಕರಣ ದಾಖಲಾಗಿದೆ.

ವೀರಾಜಪೇಟೆ ಸಮೀಪದ ನಿವಾಸಿ, ಮಾಜಿ ಉದ್ಯೋಗಿ ಕೆ.ಜಿ. ಪೊನ್ನಣ್ಣ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ವಂಚನೆ ಹಾಗೂ ದಾಖಲೆ ದುರ್ಬಳಕೆ, ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಬಿಎನ್‌ಎಸ್ ೩೩೬ (೨), ೩೩೬ (೩) ಹಾಗೂ ೩೧೮ (೨), ೩೧೮ (೪) ಅಡಿ ಕೆಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ. ನಾಯಕ್ ನೀಡಿದ ದೂರಿನ ಅನ್ವಯ ನಗರ ಠಾಣೆಯಲ್ಲಿ ಎಫ್‌ಐಆರ್ ಆಗಿದೆ.

ಏನಿದು ಪ್ರಕರಣ?

ಮಡಿಕೇರಿಯ ಕೆಡಿಸಿಸಿ ಬ್ಯಾಂಕ್‌ನಲ್ಲಿ ನೌಕರನಾಗಿದ್ದ ಕೆ.ಜಿ. ಪೊನ್ನಣ್ಣ ಅವರು ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸಿ ಕೆಲಸ ಕೊಡಿಸುವ ಆಮಿಷ ಒಡ್ಡಿದ್ದಾರೆ.

ವೀರಾಜಪೇಟೆ ತಾಲೂಕಿನ ಬೆಳ್ಳರಿಮಾಡು ಗ್ರಾಮದ ಪಿ.ಎ. ನಾಣಯ್ಯ ಎಂಬವರ ಪತ್ನಿ ಪೂಜಾ ಅವರನ್ನು ಸಂಪರ್ಕಿಸಿ ಕೆಡಿಸಿಸಿ ಬ್ಯಾಂಕಿನಲ್ಲಿ ಉದ್ಯೋಗ ಕೊಡಿಸುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಸಹಿಯನ್ನು ನಕಲು ಮಾಡಿ ನಕಲಿ ನೇಮಕಾತಿ ಆದೇಶವನ್ನು ಪೂಜಾ ಅವರಿಗೆ ನೀಡಿದ್ದಾರೆ.

ಬಳಿಕ ಅವರಿಂದ ರೂ. ೬ ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ. ಅನಂತರ ನೇಮಕಾತಿಯ ಬಗ್ಗೆ ಯಾವುದೇ ಸ್ಪಷ್ಟತೆ ದೊರೆಯದಿದ್ದಾಗ ವಂಚನೆಯಾಗಿರುವುದು ತಿಳಿದು ಬಂದಿದ್ದು, ತಾ. ೧೨ ರಂದು ನಾಣಯ್ಯ ಅವರು ಕೆಡಿಸಿಸಿ ಬ್ಯಾಂಕ್‌ಗೆ ತೆರಳಿ ವಿಷಯ ತಿಳಿಸಿ ದೂರು ನೀಡಿದ್ದಾರೆ.

ಈ ಹಿಂದೆ ಬ್ಯಾಂಕ್ ಸಿಇಓ ಆಗಿದ್ದ ಉಮಾಕಾಂತ್ ಅವರ ಸಹಿ ನಕಲು ಮಾಡಿ ಕೆದಮುಳ್ಳೂರಿನ ಗಾನವಿ ಎಂಬವರಿಗೆ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿರುವುದು ಪೊನ್ನಣ್ಣ ಅವರಿಂದ ನಡೆದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬ್ಯಾಂಕ್‌ನಲ್ಲಿದ್ದ ಅಧಿಕಾರಿಗಳ ಗಮನಕ್ಕೆ ಬಾರದೆ ಬ್ಯಾಂಕ್‌ಗೆ ಸಂಬAಧಪಟ್ಟ ಸೀಲು ಮತ್ತು ಕೆಲ ದಾಖಲಾತಿಗಳನ್ನು ಕದ್ದು ತಮ್ಮ ಬಳಿ ಇರಿಸಿಕೊಂಡಿದ್ದ ಪೊನ್ನಣ್ಣ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದ ಆಮಿಷ ತೋರಿಸಿ ವಂಚನೆ ಮಾಡುತ್ತಿರುವುದು ತಿಳಿದು ಬಂದಿದೆ. ಬ್ಯಾಂಕ್‌ಗೆ ಕೆಟ್ಟ ಹೆಸರು ತರಲು ನಕಲಿ ದಾಖಲೆ ಸೃಷ್ಟಿಸಿ, ಬ್ಯಾಂಕ್‌ನ ದಾಖಲೆ ಮತ್ತು ಸೀಲ್ ಕಳ್ಳತನ ಮಾಡಿರುವ ಪೊನ್ನಣ್ಣ ವಿರುದ್ಧ ಕಾನೂನು ಕ್ರಮಕ್ಕೆ ದೂರಿನಲ್ಲಿ ದೂರುದಾರರು ಒತ್ತಾಯಿಸಿದ್ದಾರೆ.