ಸಿದ್ದಾಪುರ, ಜೂ. ೧೯: ಕರಡಿಗೋಡು ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಳವಡಿಸಿರುವ ಕಂದಕ ಹಾಗೂ ರೈಲ್ವೆ ಬ್ಯಾರಿಕೇಡ್‌ಗಳನ್ನು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಪರಿಶೀಲನೆ ನಡೆಸಿದರು.

ಕುಶಾಲನಗರ ಹಾಗೂ ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಕರಡಿಗೋಡು ಗ್ರಾಮದ ಚಿಕ್ಕನಹಳ್ಳಿ ಮತ್ತು ಮಾಲ್ದಾರೆ ಗ್ರಾಮದ ವ್ಯಾಪ್ತಿಯಲ್ಲಿ ಈ ಹಿಂದೆ ಅರಣ್ಯ ಇಲಾಖೆ ವತಿಯಿಂದ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಂದಕ ಹಾಗೂ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿತ್ತು. ಆದರೂ ಅರಣ್ಯದಿಂದ ಕಾಡಾನೆಗಳ ಹಿಂಡು ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಈ ಹಿನ್ನೆಲೆಯಲ್ಲಿ ಕರಡಿಗೋಡು ಗ್ರಾಮದ ಚಿಕ್ಕನಹಳ್ಳಿ ಭಾಗಕ್ಕೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಅವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೊಸದಾಗಿ ಬ್ಯಾರಿಕೇಡ್‌ಗಳನ್ನು ನಿರ್ಮಾಣ ಮಾಡುವ ಸ್ಥಳಗಳನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಹಾಗೂ ಉಪವಲಯ ಅರಣ್ಯ ಅಧಿಕಾರಿ ಸಂಜಿತ್ ಸೋಮಯ್ಯ ಅವರು ಸಂಕೇತ್ ಅವರಿಗೆ ಮಾಹಿತಿ ನೀಡಿದರು. ನಂತರ ಮಾತನಾಡಿದ ಸಂಕೇತ್ ಪೂವಯ್ಯ ಅವರು ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಅವುಗಳ ಉಪಟಳಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೆಬ್ಯಾರಿಕೇಡ್‌ಗಳನ್ನು ಅಳವಡಿಸಲು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರ ಬಳಿ ಚರ್ಚಿಸಿ ಅವರ ಗಮನಕ್ಕೆ ತರಲಾಗುವುದು ಎಂದರು.

ಈಗಾಗಲೇ ಪೊನ್ನಣ್ಣನವರು ಆಸಕ್ತಿ ವಹಿಸಿ ಆನೆ ಮಾನವ ಸಂಘರ್ಷ ತಡೆಗಟ್ಟಲು ಸರ್ಕಾರದಿಂದ ರೂ. ೨೮ ಕೋಟಿ ವಿಶೇಷ ಅನುದಾನವನ್ನು ಜಿಲ್ಲೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಈ ಪೈಕಿ ಕಾಡಾನೆಗಳು ಅತಿ ಹೆಚ್ಚಾಗಿ ಉಪಟಳ ನೀಡುತ್ತಿರುವ ಸ್ಥಳಗಳನ್ನು ಗುರುತಿಸಿ ಆ ಅನುದಾನವನ್ನು ಬಳಸಿಕೊಂಡು ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ಬಳಿಕ ಸಿದ್ದಾಪುರ ಹಾಗೂ ಕರಡಿಗೋಡು ಭಾಗದಲ್ಲಿ ಕಾಡಾನೆಗಳ ಹಾವಳಿಗಳನ್ನು ತಡೆಗಟ್ಟಲು ಹಾಗೂ ಆನೆ ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಲು ಶ್ರಮಿಸುವುದಾಗಿ ಅವರು ಭರವಸೆಯನ್ನು ನೀಡಿದರು. ಕರಡಿಗೋಡು ಸುತ್ತಮುತ್ತಲಿನ ಗ್ರಾಮದ ಕಾಫಿ ತೋಟಗಳಲ್ಲಿ ಅಧಿಕವಾಗಿ ಕಾಡಾನೆಗಳು ಸುತ್ತಾಡುತ್ತಿರುವ ದೂರುಗಳು ಬಂದಿದ್ದು ಈ ಭಾಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವ ಉದ್ದೇಶದಿಂದಾಗಿ ಕರಡಿಗೋಡು - ಚಿಕ್ಕನಹಳ್ಳಿ ಭಾಗದಲ್ಲಿ ಸುಮಾರು ಎಂಟು ಕಿಲೋಮೀಟರ್‌ಗಳ ರೈಲ್ವೆ ಬ್ಯಾರಿಕೇಡ್‌ಗಳ ಕಾಮಗಾರಿಯನ್ನು ನಡೆಸಲು ಶಾಸಕ ಪೊನ್ನಣ್ಣ ಅವರ ಗಮನ ಸೆಳೆಯುವುದಾಗಿ ಹಾಗೂ ಅಗತ್ಯ ಕ್ರಮ ಕೈಗೊಳ್ಳಲು ಶಾಸಕರ ಬಳಿ ಮನವಿ ಮಾಡಲಾಗುವುದೆಂದು ತಿಳಿಸಿದರು. ಕರಡಿಗೋಡು ಗ್ರಾಮದ ಸುತ್ತಮುತ್ತಲಿನಲ್ಲಿ ಅಧಿಕ ಕಾಡಾನೆಗಳು ನುಸುಳಿ ಬರುವ ಜಾಗವನ್ನು ಮುಂದಿನ ದಿನಗಳಲ್ಲಿ ಶಾಸಕರ ಗಮನಕ್ಕೆ ತಂದು ಅವರನ್ನು ಖುದ್ದಾಗಿ ಸ್ಥಳಕ್ಕೆ ಕರೆತಂದು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಸಂಕೇತ್ ತಿಳಿಸಿದರು.

ಈ ಸಂದರ್ಭದಲ್ಲಿ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಹಾಗೂ ಉಪವಲಯ ಅರಣ್ಯ ಅಧಿಕಾರಿ ಸಂಜೀತ್ ಸೋಮಯ್ಯ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಆನೆ ಕಾರ್ಯಪಡೆ, ಆರ್.ಆರ್.ಟಿ. ಸಿಬ್ಬಂದಿಗಳು ಹಾಜರಿದ್ದರು.