ಮಡಿಕೇರಿ, ಜೂ.೧೯: ಕೃಷಿ ಭೂಮಿಯಲ್ಲಿ ವಿವಿಧ ರೀತಿಯ ಮಣ್ಣುಗಳಿದ್ದು, ಬೆಳೆಗಾರರು ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿನ ಫಲವತ್ತತೆಯ ಗುಣಮಟ್ಟದ ಬಗ್ಗೆ ತಿಳಿದುಕೊಂಡು ರಸಗೊಬ್ಬರಗಳನ್ನು ಒದಗಿಸಬೇಕು. ಮಣ್ಣು ಪರೀಕ್ಷೆ ಮಾಡಿಸದೇ ಗೊಬ್ಬರ ನೀಡಿದರೆ ಇಳುವರಿಯಲ್ಲಿ ಕುಂಠಿತವಾಗುತ್ತದೆ ಎಂದು ಭಾರತೀಯ ಕಾಫಿ ಮಂಡಳಿ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದ ವಿಜ್ಞಾನಿ ಡಾ.ಎಸ್.ಎ ನಡಾಫ್ ಹೇಳಿದರು.

ಲೂಯಿಸ್ ಡ್ರೇಫಸ್ ಸಂಸ್ಥೆ ವತಿಯಿಂದ ಕಾಫಿ ಮಂಡಳಿ ಹಾಗೂ ಸುವರ್ಣ ಕಾಫಿ ಕ್ಯೂರಿಂಗ್ ವರ್ಕ್ಸ್ ಸಹಯೋಗದಲ್ಲಿ ಮಕ್ಕಂದೂರು ಗ್ರಾಮದ ಸುವರ್ಣ ಇಕೋ ವಿಲೇಜ್ ರೆಸಾರ್ಟ್ನಲ್ಲಿ ಏರ್ಪಡಿಸಲಾಗಿದ್ದ ಕಾಫಿ ಕೃಷಿಯಲ್ಲಿ ಸಮಗ್ರ ಪೋಷಕಾಂಶ ನಿರ್ವಹಣಾ ತಂತ್ರಗಳು ವಿಷಯದ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾಹಿತಿ ನೀಡಿದರು. ಕಾಫಿ ಬೆಳೆಯುವ ಪ್ರದೇಶದಲ್ಲಿ ಸಾಮಾನ್ಯವಾಗಿ ಮಣ್ಣು ಹುಳಿ ಮಿಶ್ರಿತವಾಗಿ ಆಮ್ಲೀಯದಿಂದ ಕೂಡಿದ್ದು, ಇದರಲ್ಲಿ ರಸಸಾರ ಕಡಿಮೆ ಇರುತ್ತದೆ. ಹಾಗಾಗಿ ಅಧಿಕ ಇಳುವರಿ ಪಡೆಯಲೆಂದು ಅವೈಜ್ಞಾನಿಕವಾಗಿ ವಿವಿಧ ರಸಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಆರೋಗ್ಯ ಕೆಡುತ್ತದೆ. ಫಲವತ್ತತೆ ಕುಸಿದು ಬೆಳೆ ಕಳೆದುಕೊಳ್ಳುವ ಸ್ಥಿತಿ ಬರಬಹುದು. ಪರೀಕ್ಷೆ ಮಾಡದೆ ಗೊಬ್ಬರ ಹಾಕುವದರಿಂದ ಆರ್ಥಿಕವಾಗಿಯೂ ನಷ್ಟ ಉಂಟಾಗುತ್ತದೆ. ಕಾಫಿ ಗಿಡಗಳ ಮೇಲೆಯೂ ಪರಿಣಾಮ ಬೀರಿ ಗಿಡಗಳು ಕೂಡ ರೋಗಗಸ್ಥವಾಗುತ್ತವೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿನ ಫಲವತ್ತತೆ ತಿಳಿದುಕೊಂಡು ಅದಕ್ಕೆ ಅನುಸಾರವಾಗಿ ರಸಗೊಬ್ಬರವನ್ನು ಸಮರ್ಪಕ ಪ್ರಮಾಣದಲ್ಲಿ ಬಳಸಿದರೆ ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳುವ ಜೊತೆಗೆ ಉತ್ತಮ ಇಳುವರಿ ಪಡೆಯಬಹುದು ಎಂದು ಹೇಳಿದರು.

ಹುಳಿ ಮಣ್ಣಿನಲ್ಲಿ ಪೋಷಕಾಂಶ ಕಡಿಮೆ ಇರುವದರಿಂದ ಕೃಷಿ ಸುಣ್ಣ ಅಥವಾ ಡೋಲೋಮೈಟ್ ಹಾಕಬೇಕು. ೨-೩ ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಕೊಂಡು ಸುಣ್ಣ ಹಾಕಬೇಕಾಗುತ್ತದೆ. ಕಾಫಿಗೆ ೧೭ ರೀತಿಯ ಪೋಷಕಾಂಶಗಳು ಬೇಕಾಗುತ್ತದೆ, ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಎರಡರಿಂದ ಮೂರು ವರ್ಷಕ್ಕೊಮ್ಮೆ ಸಾವಯವ ಗೊಬ್ಬರ ಬಳಸಬೇಕೆಂದು ಸಲಹೆ ಮಾಡಿದರು.

ಸಲ್ಫರ್‌ಯುಕ್ತ ಗೊಬ್ಬರ ಹಾಕುವುದರಿಂದ ಕಾಫಿಯ ಪರಿಮಳ ಹೆಚ್ಚುತ್ತದೆ. ಇದರಿಂದ ಗುಣಮಟ್ಟ ಕಾಯ್ದುಕೊಳ್ಳಬಹುದು. ಕಾಫಿ ಗಿಡಕ್ಕೆ ರಸಗೊಬ್ಬರ ಪೂರೈಕೆ ಸಂದರ್ಭ ಎಚ್ಚರಿಕೆ ವಹಿಸಬೇಕು. ಅತಿಯಾದ ರಸಗೊಬ್ಬರವು ಹಾನಿಕರವಾಗಲಿದೆ. ತೇವಾಂಶ ಹಾಗೂ ಕಾಫಿ ಗಿಡದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಮಣ್ಣಿಗೆ ಸರಿಹೊಂದುವ ರಸಗೊಬ್ಬರ ಮತ್ತು ಸುಣ್ಣ ಬಳಸಬೇಕು. ಸುಣ್ಣ ಹೆಚ್ಚಾದರೂ ಆರ್ಥಿಕತೆಯ ಮೇಲೆ ಹೊಡೆತ ಬೀಳಲಿದೆ. ಸಾವಯವ ರಸಗೊಬ್ಬರ ಬಳಸುವುದರಿಂದ ಸಾರಜನಕ, ರಂಜಕ, ಪೊಟ್ಯಾಷಿಯಂನAತಹ ಪೋಷಕಾಂಶಗಳು ಹೇರಳವಾಗಿ ದೊರೆಯುತ್ತದೆ. ಸಾಧ್ಯವಾದಷ್ಟು ಕಾಂಪೋಸ್ಟ್ ಗೊಬ್ಬರವನ್ನು ತೋಟದಲ್ಲಿಯೇ ತಯಾರಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ಕಾಫಿಯು ಶೇ.೮೫ರಿಂದ ೯೦ರಷ್ಟು ಹಣ್ಣಾದ ಬಳಿಕವಷ್ಟೇ ಕೊಯ್ಲು ಮಾಡುವುದು ಸೂಕ್ತ. ಕಾಫಿ ಹಣ್ಣಾಗುವ ಮೊದಲೇ ಕೊಯ್ಲು ಮಾಡಿದ್ರೆ ಬೆಳೆಗಾರ ನಷ್ಟ ಅನುಭವಿಸಬೇಕಾಗುತ್ತದೆ. ತೋಟಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕು. ಕಾಫಿ ಜೊತೆಗೆ ಮಿಶ್ರ ಬೆಳೆಯತ್ತಲೂ ಗಮನ ಹರಿಸುವಂತೆ ತಿಳಿಸಿದರು.

ಕಾಫಿ ಮಂಡಳಿಯಿAದ ಸಹಾಯಧನ

ಕಾಫಿ ಮಂಡಳಿಯಿAದ ಲಭ್ಯವಿರುವ ಸಹಾಯಧನ ಸೌಲಭ್ಯಗಳ ಕುರಿತು ಕಾಫಿ ಮಂಡಳಿ ವಿಸ್ತರಣಾಧಿಕಾರಿ ಸನೀಶ್ ಮಾಹಿತಿ ಒದಗಿಸಿದರು. ಹಳೆಯ ತೋಟವನ್ನು ತೆಗೆದು ಹೊಸ ತೋಟ ಮಾಡುವವರಿಗೆ, ಕೆರೆ, ಬಾವಿ, ಕಾಫಿ ಒಣಗಿಸುವ ಕಣ, ಗೋದಾಮು ನಿರ್ಮಾಣ, ಕಾಫಿ ಒಣಗಿಸುವ ಯಂತ್ರ ಖರೀದಿ, ಮರ ಕಟಾವು, ಕಳೆ ಕೊಚ್ಚುವ ಯಂತ್ರಗಳಿಗೂ ಮಂಡಳಿ ವತಿಯಿಂದ ಸಹಾಯಧನ ನೀಡಲಾಗುವದೆಂದು ಮಾಹಿತಿ ನೀಡಿದರು. ಅಲ್ಲದೆ, ಮಂಡಳಿಯಿAದ ಆವಿಷ್ಕಾರ ಮಾಡಲಾದ ಹೊಸ ತಳಿಗಳ ಬಿತ್ತನೆ ಬೀಜವನ್ನು ಕೂಡ ವಿತರಣೆ ಮಾಡಲಾಗುವದು, ಬೆಳೆಗಾರರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ಮಾಡಿದರು.

ಪ್ರಮಾಣ ಪತ್ರ ಅಗತ್ಯ

ಎಲ್‌ಡಿಸಿ ರಾಷ್ಟಿçÃಯ ಸುಸ್ಥಿರ ವ್ಯವಸ್ಥಾಪಕ ತ್ರಿಭುವನ್ ಸಾತ್ವಿಕ್ ಮಾತನಾಡಿ, ಎಲ್.ಡಿ.ಸಿಯು ಜಾಗತಿಕ ಕೃಷಿ ಕಂಪೆನಿಯಾಗಿದೆ. ಇದರ ಮುಖ್ಯ ಕಚೇರಿ ನೆದರ್‌ಲ್ಯಾಂಡ್‌ನಲ್ಲಿ ಇದ್ದು, ೧೯೯೭ರಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿತು. ಕೃಷಿಗೆ ಸಂಬAಧಪಟ್ಟ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆ ಇದಾಗಿದ್ದು, ದೆಹಲಿಯಲ್ಲಿ ಕೇಂದ್ರ ಕಚೇರಿ ಇದೆ. ಕಾಫಿ ಬೆಳೆಗೆ ಸಂಬAಧಪಟ್ಟ ಕಚೇರಿ ಬೆಂಗಳೂರಿನಲ್ಲೂ ಇದೆ ಎಂದರು. ಕಾಫಿಗೆ ಅಂತರರಾಷ್ಟಿçÃಯ ಮಟ್ಟದಲ್ಲಿ ಪ್ರಮಾಣ ಪತ್ರದ ಅಗತ್ಯವಿದೆ. ಸಂಸ್ಥೆಯ ಪರಿಶೋಧಕರು ತೋಟಗಳಿಗೆ ಆಗಮಿಸಿ ಪರಿಶೀಲಿಸಿ ಪ್ರಮಾಣ ಪತ್ರ ನೀಡುತ್ತಾರೆ. ಭಾರತದ ಕಾಫಿ ಯುರೋಪಿಯನ್ ದೇಶಗಳಿಗೆ ರಫ್ತಾಗುವದರಿಂದ ಈ ಪ್ರಮಾಣ ಪತ್ರದ ಅಗತ್ಯವಿದ್ದು, ಇದರಿಂದ ಕಾಫಿಗೆ ಉತ್ತಮ ದರ ಲಭಿಸಲಿದೆ ಎಂದು ಹೇಳಿದರು.

ಬೆಲೆಯಿದ್ದರೂ ಬೆಳೆ ಕಷ್ಟ

ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಸುವರ್ಣ ಕಾಫಿ ಕ್ಯೂರಿಂಗ್ ವರ್ಕ್ಸ್ ಮಾಲೀಕರು ಹಾಗೂ ಮಕ್ಕಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಎನ್ ರಮೇಶ್; ಕಾಫಿಗೆ ಬೆಲೆ ಹೆಚ್ಚಾದರೂ ಕಾಫಿ ಬೆಳೆಯ ನಿರ್ವಹಣೆ ಮಾಡುವುದು ಸುಲಭದ ಕೆಲಸವಲ್ಲ. ವರ್ಷಕ್ಕೆ ಹಲವು ಬಾರಿ ಗೊಬ್ಬರ ಪೂರೈಕೆ ಇತರ ವೆಚ್ಚಗಳು ಸೇರಿದಂತೆ ಉತ್ತಮ ಇಳುವರಿ ಪಡೆಯಲು ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ ಎಂದರು. ಪೋಷಕಾಂಶದ ಕೊರತೆ ನಡುವೆಯೂ ಕಡಿಮೆ ವೆಚ್ಚದಲ್ಲಿ ಬೆಳೆ ಬೆಳೆಯುವ ಬಗ್ಗೆ, ನಿರ್ವಹಣೆ ಬಗ್ಗೆ ಅರಿತುಕೊಳ್ಳುವಲ್ಲಿ ತರಬೇತಿ ಕಾರ್ಯಾಗಾರ ರೈತರಿಗೆ ಉಪಯುಕ್ತವಾಗಲಿದೆ ಎಂದರು.

ಬೆಳೆಗಾರರೊAದಿಗೆ ಸಂವಾದ

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಬೆಳೆಗಾರರು ಕೇಳಿದ ಪ್ರಶ್ನೆಗಳಿಗೆ, ವಿಜ್ಞಾನಿಗಳು ಉತ್ತರಿಸಿ ಸಲಹೆಗಳನ್ನು ನೀಡಿದರು.

ಟಾರ್ಪಲ್ ವಿತರಣೆ

ಇದೇ ಸಂದರ್ಭ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಸುಮಾರು ೧೨೦ ಬೆಳೆಗಾರರಿಗೆ ಲೂಯಿಸ್ ಡ್ರೇಫಸ್ ಸಂಸ್ಥೆಯಿAದ ಉಚಿತವಾಗಿ ಟಾರ್ಪಲ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರಾದ ಆದರ್ಶ್ ನಿರೂಪಿಸಿದರೆ, ಅಜಯ್ ವಂದಿಸಿದರು.