ಮಡಿಕೇರಿ, ಜೂ. ೧೮ : ನಗರದ ಕೈಗಾರಿಕಾ ಬಡಾವಣೆಯ ರಸ್ತೆಗೆ ಕೊಡಗು ಪತ್ರಿಕಾ ರಂಗದ ಭೀಷ್ಮ ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರಾದ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರನ್ನಿಡಲು ನಗರಸಭಾ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆಯಿತು.

ನಗರಸಭಾ ಅಧ್ಯಕ್ಷೆ ಕಲಾವತಿ ಅವರ ಅಧ್ಯಕ್ಷತೆಲ್ಲಿ ನಡೆಸ ಸಭೆಯಲ್ಲಿ ಮಾತನಾಡಿದ ಆಯುಕ್ತ ರಮೇಶ್ ನಗರದ ಕೈಗಾರಿಕಾ ಬಡಾವಣೆ (ಪತ್ರಿಕಾಭವನದಿಂದ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿವರೆಗಿನ) ರಸ್ತೆಗೆ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರನ್ನು ನಾಮಕರಣ ಮಾಡುವಂತೆ ಕೊಡಗು ಪತ್ರಕರ್ತರ ಸಂಘ ಮನವಿ ಸಲ್ಲಿಸಿದೆ ಎಂದು ವಿಚಾರ ಪ್ರಸ್ತಾಪಿಸಿದರು. ಈ ವೇಳೆ ಅನುಮೋದನೆ ನೀಡುವಂತೆ ಸಭೆಯಲ್ಲಿ ಸದಸ್ಯರು ಒಪ್ಪಿಗೆ ಸೂಚಿಸಿದರು. ಈ ಹಿಂದೆ ಕೊಡಗು ಪ್ರೆಸ್‌ಕ್ಲಬ್ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ವೃತ್ತ ನಿರ್ಮಿಸಿ ಆ ವೃತ್ತಕ್ಕೆ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರಿಡಲು ನಗರಸಭೆಗೆ ಮನವಿ ನೀಡಿದ್ದುದನ್ನು ಇಲ್ಲಿ ಸ್ಮರಿಸಬಹುದು.