ಶಾಲೆಯಿಂದ ಸಂಜೆ ಮನೆಗೆ ಬಂದ ಐದು ವರ್ಷದ ಪುಟಾಣಿ ಚೈತ್ರಾ, ಮನೆಯಲ್ಲಿ ಅಮ್ಮ ತಿಂಡಿಗೆ ಕರೆದರೂ ಒಳಗೆ ಬರದೆ ಮನೆಯ ಬಾಗಿಲಿನ ಸಮೀಪವೇ ಕುಳಿತು ಅಪ್ಪನ ನಿರೀಕ್ಷೆಯಲ್ಲಿ ಪದೇಪದೇ ಹೊರಗೆ ನೋಡುತ್ತಲೇ ಇದ್ದಳು. “ಅಪ್ಪ ಮನೆಗೆ ಬರಲಿ ಅಮ್ಮ, ಆಮೇಲಷ್ಟೇ ನಾನು ತಿಂಡಿ ತಿನ್ನುವುದು” ಎನ್ನುವ ಅವಳ ಮಾತಿನಲ್ಲಿ ಅವಳಿಗೆ ಅಪ್ಪನ ಮೇಲಿದ್ದ ಪ್ರೀತಿ ಎತ್ತಿತೋರಿಸುತ್ತಿತ್ತು. ಇದು ಕೇವಲ ಆ ಮನೆಯ ಚೈತ್ರಾ ಮಾತ್ರವಲ್ಲ, ಬಹುತೇಕ ಎಲ್ಲ ಮನೆಗಳಲ್ಲಿಯೂ ಅಪ್ಪ ಕೆಲಸ ಮುಗಿಸಿ ಸಂಜೆ ಮನೆಗೆ ಬರುವುದನ್ನೇ ಮಕ್ಕಳು ಕಾಯುತ್ತಿರುತ್ತಾರೆ. ಅಮ್ಮ ಅದೆಷ್ಟೇ ಪ್ರೀತಿ ತೋರಿದರೂ ಮಕ್ಕಳಿಗೆ ಅಪ್ಪ ಎಂದರೆ ಹೇಳಲಾಗÀದ ಒಲವು, ಗೌರವಾದರಗಳು ಇರುತ್ತವೆ. ಅಪ್ಪ ಎನ್ನುವ ಈ ಅದ್ಭುತವೂ ರೋಚಕವೂ ಆದ ವ್ಯಕ್ತಿಯನ್ನು ಗೌರವಿಸಲು ಪ್ರತಿವರ್ಷವೂ ಜೂನ್ ತಿಂಗಳ ಮೂರನೆಯ ಭಾನುವಾರ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ.
ತಂದೆಯರ ದಿವಸದಂದು ಮಕ್ಕಳ ಭವಿಷ್ಯವನ್ನು ರೂಪಿಸುವ, ಮಕ್ಕಳಿಗೆ ಮಾರ್ಗದರ್ಶನ ತೋರುವÀ ಮತ್ತು ಒಲುಮೆ ನೀಡುವ ಅಪ್ಪಂದಿರನ್ನು ಗೌರವಿಸಲು ನಡೆಸಲಾಗುತ್ತದೆ. ತಂದೆ ತನ್ನ ಮಕ್ಕಳಿಗಾಗಿ ಮಾಡುವ ಹಲವಾರು ತ್ಯಾಗಗಳನ್ನು ಸ್ಮರಿಸಿ ಕೃತಜ್ಞತೆ ತೋರಲೂ ಈ ದಿನವನ್ನು ಆಯ್ದುಕೊಳ್ಳಲಾಗುತ್ತದೆ. ಕೇವಲ ಜೈವಿಕ ತಂದೆಯನ್ನು ಮಾತ್ರವಲ್ಲದೆ ದತ್ತು ತೆಗೆದುಕೊಂಡು ಸಾಕಿ ಸಲಹುವ ಇತರ ಪುರಷರನ್ನೂ ಗೌರವಿಸಲು ಈ ದಿನವನ್ನು ಆರಿಸಿಕೊಳ್ಳಲಾಗುತ್ತದೆ.
ಮಕ್ಕಳಿಗೆ ತಾಯಿಯಲ್ಲಿ ಸಲಿಗೆ, ಪ್ರೀತಿಯಿದ್ದರೂ ತಂದೆಯವರಲ್ಲಿ ಹೆಚ್ಚಿನ ಗೌರವ ಇರುತ್ತದೆ. ಪ್ರತಿಯೊಂದು ಮಗು ತನ್ನ ತಂದೆ ಶ್ರೇಷ್ಠ, ಅವನಿಗೆ ಎಣೆಯು ಜಗತ್ತಿನಲ್ಲಿಯೇ ಇಲ್ಲ ಎಂದು ಭಾವಿಸುತ್ತದೆ. ತಂದೆ ಪೇಟೆಗೆ ಹೋಗುವಾಗ ತಾನೂ ಬರುತ್ತೇನೆ ಎಂದು ಹಠ ಮಾಡುವುದಲ್ಲದೆ, ಹಾಗೆ ತಂದೆ ಕರೆದುಕೊಂಡು ಹೋಗುವಾಗ ಮುಖದಲ್ಲಿ ಇನ್ನಿಲ್ಲದ ಪರಿಯಲ್ಲಿ ನಗುವನ್ನು ಹೊರಚೆಲ್ಲುತ್ತ ಮಗು ಅಪ್ಪನೊಂದಿಗೆ ಪೇಟೆಗೆ ಹೋಗುತ್ತದೆ. ಅಲ್ಲಿ, ಅಪ್ಪನ ಹೆಗಲ ಮೇಲೆ ಕುಳಿತುಕೊಂಡು ದೂರದಲ್ಲಿ ಹೋಗುತ್ತಿರುವ ಮೆರವಣಿಗೆಯನ್ನೋ ಅಥವಾ ಜಾದೂಗಾರ ಮಾಡುವ ಜಾದುವನ್ನೋ ನೋಡುತ್ತ ಮೈಮರೆತು ಬಿಡುತ್ತದೆ. ಅಪ್ಪ ಕೊಡಿಸುವ ಐಸ್ ಕೇಂಡಿ ತಾನು ಅಂಗಡಿಯಲ್ಲಿ ಕೊಳ್ಳುವ ಐಸ್ಕೇಂಡಿಗಿAತಲೂ ಎಷ್ಟೋ ಪಟ್ಟು ಹೆಚ್ಚು ರುಚಿ ಎಂದು ಮಗು ಭಾವಿಸುತ್ತದೆ. ಅಪ್ಪ ತಾನು ಹರಕಲು ಅಥವಾ ಸವೆದ ಚಪ್ಪಲಿಯನ್ನು ಹಾಕಿಕೊಂಡರೂ ತನ್ನ ಮಗು ಹೊಸತಾದ, ಆಕರ್ಷಕ ಶೂಸನ್ನು ಹಾಕಬೇಕೆಂದೇ ಬಯಸುತ್ತಾನೆ. ಅಮ್ಮನಾದರೂ ತಾಳ್ಮೆ ಕಳೆದುಕೊಂಡಾಗ ತನ್ನ ಮಗುವಿಗೆ ಒಂದೆರಡು ಏಟನ್ನು ಕೊಡಬಹುದಾದರೂ ಅಪ್ಪನಂತೂ ಎಂದೂ ಮಗುವನ್ನು ಹೊಡೆಯುವುದಿಲ್ಲ. ಅಪ್ಪನ ಜೊತೆ ತಾನಿದ್ದರೆ ತನಗೆ ಭಯವಿಲ್ಲ ಎನ್ನುವ ಕಾರಣ ಮಕ್ಕಳು ಅಮ್ಮನಿಗಿಂತ ಅಪ್ಪನನ್ನೇ ಹೆಚ್ಚು ಇಷ್ಟಪಡುವುದಾಗಿರಬಹುದು.
ಈ ದಿನವನ್ನು ಹಲವು ರೀತಿಗಳಲ್ಲಿ ಆಚರಿಸಿ ಸಂಭ್ರಮಿಸಬಹುದು. ಮೊದಲನೆಯದಾಗಿ ಈ ದಿವಸ ತಂದೆಯ ಜೊತೆಯಲ್ಲಿ ಹೊರಗೆ ಹೋಗುವ ಮತ್ತಿತರ ಚಟುವಟಿಕೆಗಳನ್ನು ಮಾಡುವುದರ ಮೂಲಕ ಆಚರಿಸಬಹುದು. ಇದು ಕಾರ್ಯಗತವಾಗದಿದ್ದಲ್ಲಿ ತಂದೆಯವರೊAದಿಗೆ ಕೆಲವು ಗಂಟೆ ಕುಳಿತಾದರೂ ಪ್ರೀತಿಯಿಂದ ಮಾತನ್ನಾಡಿ ಅವರಿಗೆ ಚಿಕ್ಕಪುಟ್ಟ್ಟ ಉಡುಗೊರೆಯನ್ನು ನೀಡುವುದರ ಮೂಲಕವೂ ಗೌರವಿಸಬಹುದು. ತಂದೆಯ ಜೊತೆಯಲ್ಲಿ ಭಾವಚಿತ್ರಗಳನ್ನು ತೆಗೆದುಕೊಳ್ಳುವುದರ ಮೂಲಕ ಅಥವಾ ಯಾವುದಾದರೂ ಕಥೆಯನ್ನು ಹೇಳುವುದರ ಮೂಲಕ ಅಥವಾ ಒಂದು ಚೆಂದದ ಚಿತ್ರವನ್ನು ಬಿಡಿಸಿ ಅದನ್ನು ಅಪ್ಪನಿಗೆ ನೀಡುವುದರ ಮೂಲಕವೂ ದಿನವನ್ನು ಆಚರಿಸಬಹುದು.
ತನಗೆ ಸರಿಯಾಗಿ ಉಣ್ಣಲೂ, ಉಡಲೂ ಇಲ್ಲದಿದ್ದರೂ ಮಕ್ಕಳಿಗಾಗಿ ಎಲ್ಲವನ್ನೂ ನೀಡಿ ಉತ್ತಮವಾದ ಪ್ರಜೆಯನ್ನಾಗಿ ಮಾಡುವ ಅಪ್ಪನ ಬಗ್ಗೆ ಎಲ್ಲರೂ ಹೆಮ್ಮೆಪಡಬೇಕು. ಅಪ್ಪನ ವೃದ್ಧಾಪ್ಯದಲ್ಲಿ ಸರಿಯಾಗಿ ನೋಡಿಕೊಳ್ಳಬೇಕು. ಹಾಗಿದ್ದಾಗ ಮಾತ್ರ ಅಪ್ಪದ ದಿನಕ್ಕೆ ಮಹತ್ವ ಬರಬಹುದು.
- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು. ಮೊ. ೯೧೪೧೩೯೫೪೨೬.