ಸೋಮವಾರಪೇಟೆ, ಜೂ. ೧೪: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ವಿನೂತನ ಪ್ರಯೋಗ ಇತ್ತೀಚಿನ ವರ್ಷಗಳಲ್ಲಿ ಏರುಗತಿಯಲ್ಲಿದ್ದು, ಸ್ಥಳೀಯ ವಿದ್ಯಾಭಿಮಾನಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿದ್ದಾರೆ. ಸಮೀಪದ ಮಸಗೋಡು ಗ್ರಾಮದ ತಣ್ಣೀರುಹಳ್ಳ ಸರ್ಕಾರಿ ಶಾಲೆಯಲ್ಲಿಯೂ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕೆ ದಾನಿಯೋರ್ವರು ವಾಹನದ ವ್ಯವಸ್ಥೆ ಒದಗಿಸಿದ್ದಾರೆ.
ಸಮೀಪದ ಮಸಗೋಡು-ತಣ್ಣೀರುಹಳ್ಳದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಆಂಗ್ಲ ಮಾಧ್ಯಮ ಎಲ್.ಕೆ.ಜಿ., ಯು.ಕೆ.ಜಿ. ತರಗತಿಗಳ ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆಯ ಹಳೆಯ ವಿದ್ಯಾರ್ಥಿ, ಸ್ಥಳೀಯರಾದ ಪೂವಪ್ಪ ಹಾಗೂ ಲೀಲಾವತಿ ದಂಪತಿ ಪುತ್ರ ಬಿ.ಪಿ. ರವಿ ಅವರು ರೂ. ೪ ಲಕ್ಷ ವೆಚ್ಚದಲ್ಲಿ ವಾಹನವನ್ನು ಉಚಿತವಾಗಿ ಒದಗಿಸಿದರು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿAದ ವಾಹನವನ್ನು ಬರಮಾಡಿಕೊಂಡರು. ಶಾಲಾ ವಿದ್ಯಾರ್ಥಿಗಳ ಅಗತ್ಯವಾಗಿರುವ ವಾಹನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಅವರು ಹಸಿರು ನಿಶಾನೆ ತೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಸಿ. ತಿಮ್ಮಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ವಿನೋದ್ಕುಮಾರ್, ಆಂಗ್ಲಮಾಧ್ಯಮ ಶಾಲಾ ಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ಕೆ. ಲೋಕಾನಂದ, ಗ್ರಾ.ಪಂ. ಉಪಾಧ್ಯಕ್ಷೆ ಜಲಜಾ ದಿನೇಶ್, ಸದಸ್ಯರುಗಳಾದ ಅಶ್ವಿನಿ, ಕವಿತಾ, ಪ್ರವೀಣ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಫೀಕ್, ಸದಸ್ಯರಾದ ಅಬ್ದುಲ್ ಶಾಲಿ, ಹಬೀಬ್, ಹರೀಶ್, ಪ್ರವೀಣ್, ರೇವತಿ ಸೇರಿದಂತೆ ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು.