ಕೋವರ್‌ಕೊಲ್ಲಿ ಇಂದ್ರೇಶ್

ಮೈಸೂರು, ಜೂ. ೯: ಕೊಡಗಿನ ಜನತೆಯ ಬಹು ವರ್ಷಗಳ ಕನಸಾಗಿರುವ ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಇನ್ನೂ ಅನೇಕ ವರ್ಷ ಕನಸಾಗಿಯೆ ಉಳಿದುಕೊಳ್ಳಲಿದೆ. ಈ ಮಾಹಿತಿಯನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಮೈಸೂರು -ಕುಶಾಲನಗರ ಮತ್ತು ಹೆಜ್ಜಾಲ - ಚಾಮರಾಜನಗರ ಈ ಎರಡು ರೈಲ್ವೆ ಯೋಜನೆಗಳನ್ನು ಮುಂದುವರಿಸಲು ಆಸಕ್ತಿ ಹೊಂದಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರವು ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಹೇಳಿದರು. ಕುಶಾಲನಗರ ರೈಲು ಯೋಜನೆ ೨೦೧೧ ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಮೊಟ್ಟ ಮೊದಲ ಬಾರಿಗೆ ಚರ್ಚೆಗೆ ಬಂದಿದ್ದು ಬಜೆಟ್‌ನಲ್ಲಿ ಸರ್ವೆ ಕೈಗೆತ್ತಿಕೊಳ್ಳಲಾಗುವುದೆಂದು ಭರವಸೆ ನೀಡಲಾಗಿತ್ತು. ನಂತರ ೨೦೧೬-೧೭ ನೇ ಸಾಲಿನಲ್ಲಿ ಕೇಂದ್ರ ರೈಲ್ವೇ ಇಲಾಖೆ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲು ಅನುದಾನ ಒದಗಿಸಿತು. ಸರ್ವೆ ಕಾರ್ಯ ನಡೆದ ನಂತರ ಈ ಯೋಜನೆ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಹಿನ್ನಡೆ ಆಗಿತ್ತು.

ನಂತರ ಅಂದಿನ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರ ಪ್ರಯತನದಿಂದಾಗಿ ಯೋಜನೆಗೆ ಮತ್ತೆ ಮರು ಜೀವ ಬಂದಿತು. ಕುಂಟುತ್ತಾ ಸಾಗಿದ ಯೋಜನೆಯ ೮೭.೫ ಕಿಮಿ ಉದ್ದದ ಮಾರ್ಗದ ಒಟ್ಟು ಮೊತ್ತ ೬೬೭ ಕೋಟಿ ರೂಪಾಯಿಗಳಿಂದ ೧೮೫೪ ಕೋಟಿ ರೂಪಾಯಿಗಳಿಗೆ ಜಿಗಿತವಾಯಿತು.

ಸಂಸದರ ಪ್ರಯತ್ನದಿಂದ ೨೦೨೩ ರಲ್ಲಿ ಕೇಂದ್ರ ರೈಲ್ವೇ ಇಲಾಖೆ ಅಂತಿಮ ಸ್ಥಳ ಸಮೀಕ್ಷೆ (ಈiಟಿಚಿಟ ಐoಛಿಚಿಣioಟಿ Suಡಿveಥಿ) ಕೂಡ ನಡೆಸಲಾಯಿತು. ಈ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇಕಡಾ ೫೦ ರ ವೆಚ್ಚದಲ್ಲಿ ಹಣ ಹೂಡಿಕೆ ಮಾಡಬೇಕಿತ್ತು.

ಈಗ ರಾಜ್ಯ ಸರ್ಕಾರವು ಯೋಜನೆಯ ಕಾರ್ಯಸಾಧ್ಯತೆಯ ಯಶಸ್ಸು ಅಂದರೆ ಹೂಡಿಕೆಗೆ ಪ್ರತಿಫಲ ನಿರೀಕ್ಷೆಯ ಮಟ್ಟದಲ್ಲಿ ಅಥವಾ ಲಾಭದಾಯಕವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ರಾಜ್ಯದ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಹೂಡಿಕೆ ಕುರಿತ

(ಮೊದಲ ಪುಟದಿಂದ) ಸಂಪುಟ ಸಮಿತಿ - (ಯೋಜನಾ ಮೇಲ್ವಿ ಚಾರಣೆ) ಈ ಯೋಜನೆಯನ್ನು ಕೈಬಿಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.ಬಹಳ ವರ್ಷಗಳ ಕನಸಾಗಿದ್ದ ಈ ಯೋಜನೆಯ ಭೂಸ್ವಾಧೀನ ಮಾಡಿಕೊಳ್ಳಲು ಕ್ಷಣಗಣನೆ ಆರಂಭವಾಗಿದ್ದ ಬೆನ್ನಿನಲ್ಲೇ ರಾಜ್ಯ ಸರ್ಕಾರದ ಹೂಡಿಕೆ ಸಮಿತಿ ಈ ಯೋಜನೆ ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂಬ ಕುಂಟು ನೆಪ ಒಡ್ಡಿ ಕೈ ಬಿಟ್ಟಿರುವುದು ಕೊಡಗಿನ ಸಂಪರ್ಕಕ್ಕೆ ಅತೀ ದೊಡ್ಡ ಹಿನ್ನಡೆ ಆದಂತಾಗಿದೆ. ಏಕೆಂದರೆ ಈ ವಿಷಯವು ದಶಕಗಳ ಮೊದಲೇ ಎರಡೂ ಸರ್ಕಾರಗಳಿಗೆ ತಿಳಿದಿರುವ ವಿಷಯವೇ ಆಗಿದೆ.

ವಾರ್ಷಿಕವಾಗಿ ಕೋಟ್ಯಂತರ ರೂಪಾಯಿಗಳ ತೆರಿಗೆ ಪಾವತಿಸುವ ಪುಟ್ಟ ಜಿಲ್ಲೆ ಕೊಡಗು ಇಂದಿಗೂ ರೈಲು ಸೌಲಭ್ಯದಿಂದ ವಂಚಿತವಾಗಿದ್ದು ರಕ್ಷಣಾ ಇಲಾಖೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಯೋಧರ ಪ್ರಯಾಣಕ್ಕೆ , ಪ್ರವಾಸಿಗರ ಪ್ರಯಾಣಕ್ಕೆ ಅನಾನುಕೂಲ ಆದಂತಾಗಿದೆ. ನಮ್ಮ ಶಾಸಕರು ಹಾಗೂ ಸಂಸದರು ಈ ವಿಷಯದಲ್ಲಿ ದೊಡ್ಡ ದನಿಯೆತ್ತಿ ಜನತೆಗೆ ಅಗತ್ಯ ಮೂಲಭೂತ ಪ್ರಯಾಣ ಸೌಲಭ್ಯ ಒದಗಿಸಿ ಕೊಡಬೇಕಾಗಿದೆ. ಕಡಿಮೆ ವೆಚ್ಚದಲ್ಲಿ ಕಾಫಿಯನ್ನು ಸಾಗಾಟ ಮಾಡಲೂ ಈ ಯೋಜನೆ ಸಹಕಾರಿಯಾಗುತ್ತಿತ್ತು.

ರಾಜ್ಯದ ಹೆಚ್ಚಿನ ರೈಲ್ವೇ ಯೋಜನೆಗಳು ಸುಮಾರು ೨೫ ರಿಂದ ೪೦ ವರ್ಷಗಳಿಂದ ಬಾಕಿ ಉಳಿದಿವೆ, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ವಿಕ್ಷಿತ್ ಭಾರತ್‌ನಲ್ಲಿ ರೈಲ್ವೆಗೆ ಮಹತ್ತರವಾದ ಪಾತ್ರವನ್ನು ಕಲ್ಪಿಸಿರುವುದರಿಂದ ಮತ್ತು ದೇಶಾದ್ಯಂತ ರೈಲ್ವೆ ಮೂಲ ಸೌಕರ್ಯವನ್ನು ನವೀಕರಿಸು ತ್ತಿರುವುದರಿಂದ ಅವುಗಳನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ ಎಂದು ಸೋಮಣ್ಣ ಹೇಳಿದರು. ರಸ್ತೆಯಿಂದ ರೈಲಿಗೆ ಸರಕು ಸಾಗಣೆ ಯನ್ನು ಉತ್ತೇಜಿಸಲು ಗ್ರೀನ್‌ಫೀಲ್ಡ್ ಸರಕು ಸಾಗಣೆ ಕಾರಿಡಾರ್‌ಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಸಚಿವರು ಹೇಳಿದರು, ಏಕೆಂದರೆ ಇದು ಆರ್ಥಿಕ ಮಿತವ್ಯಯಿ ಮತ್ತು ಪರಿಸರ ಸ್ನೇಹಿಯಾಗಿದೆ ಎಂದೂ ಅವರು ಹೇಳಿದರು.