ಹೆಚ್.ಜೆ. ರಾಕೇಶ್
ಮಡಿಕೇರಿ, ಜೂ. ೮: ಬಡತನ ರೇಖೆಯಲ್ಲಿರುವವರಿಗೆ ನೀಡಲಾಗುವ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಸ್ಥಗಿತಗೊಳಿಸಿ ಹಲವು ಸಮಯ ಕಳೆದಿದ್ದು, ಸಾವಿರಾರು ಫಲಾನುಭವಿಗಳು ಅರ್ಜಿ ಸಲ್ಲಿಕೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ನಡುವೆ ಬಿಪಿಎಲ್ ಕಾರ್ಡ್ಗಳಿಗಾಗಿ ಸಲ್ಲಿಕೆಯಾಗಿರುವ ೧,೧೨೭ ಅರ್ಜಿಗಳು ಸರಕಾರದ ಮಟ್ಟದಲ್ಲಿ ಅನುಮೋದನೆಗೊಳ್ಳಲು ಬಾಕಿ ಉಳಿದಿದ್ದು, ೪೯೬ ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿವೆ.
ವಿವಿಧ ಸರಕಾರಿ ಯೋಜನೆಗಳನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಅತ್ಯವಶ್ಯಕವಾಗಿದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗುತ್ತದೆ. ಪ್ರಸ್ತುತ ಸರಕಾರದ ಗ್ಯಾರಂಟಿ ಯೋಜನೆಗಳಿಂದಲೂ ಬಿಪಿಎಲ್ ಕಾರ್ಡ್ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
ಬಿಪಿಎಲ್ ಕಾರ್ಡ್ ಪಡೆಯಲು ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಕಳೆದ ೨ ವರ್ಷಗಳಿಂದ ಅರ್ಜಿಗಳು ತಾಂತ್ರಿಕ ಕಾರಣಗಳಿಂದ ಸಮರ್ಪಕವಾಗಿ ಸ್ವೀಕಾರವಾಗಿಲ್ಲ. ರಾಜ್ಯ ವ್ಯಾಪಿ ಲಕ್ಷಾಂತರ ಮಂದಿ ಕಾರ್ಡ್ಗಾಗಿ ಕಾಯುತ್ತಿದ್ದು, ಸರಕಾರದ ನಡೆಯಿಂದ ಜನ ನಿರಾಶರಾಗಿದ್ದಾರೆ.
ಈ ಹಿಂದೆ ಸರಕಾರ ಅಕ್ರಮ ಬಿಪಿಎಲ್ ಕಾರ್ಡ್ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ನಿಯಮ ಉಲ್ಲಂಘಿಸಿ ಕಾರ್ಡ್ ಪಡೆದವರ ಪತ್ತೆ ನಡೆಸಿ ಹೆಚ್ಚಿನ ಆದಾಯ ಉಳ್ಳವರು, ಸ್ವಂತ ವಾಹನ ಹೊಂದಿರುವವರು, ಆದಾಯ ತೆರಿಗೆ ಪಾವತಿದಾರರು ಸೇರಿದಂತೆ ನಿಯಮ ಮೀರಿ ಪಡೆದ ಕಾರ್ಡ್ಗಳನ್ನು ಅಮಾನತುಗೊಳಿಸಿತ್ತು. ಇದರಿಂದ ಅನೇಕ ಅನರ್ಹರಿಂದ ಕಾರ್ಡ್ ಕೈ ತಪ್ಪಿತ್ತು. ಜೊತೆಗೆ ತಾಂತ್ರಿಕ ಕಾರಣಗಳಿಂದ ಅರ್ಹರು ಕೂಡ ಕಾರ್ಡ್ ಕಳೆದುಕೊಂಡ ಪರಿಸ್ಥಿತಿ ಸೃಷ್ಟಿಯಾಗಿತ್ತು. ಸತತ ಪ್ರಯತ್ನ ನಡೆಸಿ, ಆಡಳಿತದ ಗಮನ ಸೆಳೆದು ಅರ್ಹರನ್ನು ಗುರುತಿಸಿ ಸರಿಪಡಿಸುವ ಪ್ರಕ್ರಿಯೆಯೂ ನಡೆದಿತ್ತು.
ಬಾಕಿ ಉಳಿದಿರುವ ಪ್ರಕ್ರಿಯೆ
ಕಳೆದ ಹಲವು ಸಮಯದಿಂದ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಾಕಿ ಉಳಿದುಕೊಂಡಿದೆ. ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಸಿದರೂ ಅದರಲ್ಲಿ ಬೆರಳೆಣಿಕೆ ಮಂದಿಗೆ ಮಾತ್ರ ಕಾರ್ಡ್ ಅನುಮೋದನೆಯಾಗಿದ್ದು, ಬಹುಪಾಲು ಮಂದಿಗೆ ಇಂದಿಗೂ ಕಾರ್ಡ್ ಕೈ ಸೇರಿಲ್ಲ.
ಕಳೆದ ೪ ವರ್ಷಗಳಿಂದಿಚೆಗೆ ಪೂರ್ಣ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳು ನಡೆದಿಲ್ಲ. ಸರ್ವರ್ ಸಮಸ್ಯೆ, ಪೋರ್ಟಲ್ ಅನ್ನು ಸರಕಾರ ಸ್ಥಗಿತಗೊಳಿಸಿದ ಕಾರಣ ಹಲವು ಫಲಾನುಭವಿಗಳಿಗೆ ಕಾರ್ಡ್ ಪಡೆಯಲು ಸಾಧ್ಯವಾಗಲಿಲ್ಲ. ನಿಗದಿತ ಕಾಲಮಿತಿ ನೀಡಿದಾಗಲೂ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅರ್ಜಿ ಸಲ್ಲಿಸಿದವರಿಗೆ ಇದುವರೆಗೂ ಕಾರ್ಡ್ ಅನುಮೋದನೆಗೊಂಡಿಲ್ಲ. ೨೦೨೩ರಲ್ಲಿ ೫೨೯ ಅರ್ಜಿಗಳು ಒಮ್ಮೆಲೆ ಅನುಮೋದನೆ ಪಡೆದಿದ್ದು, ಹೊರತುಪಡಿಸಿ ಬೇರೆ ಯಾವುದೇ ಅರ್ಜಿಗಳು ಅನಂತರ ಅನುಮೋದನೆ ಕಂಡಿಲ್ಲ.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು ೧,೪೭,೯೦೩ ಪಡಿತರ ಚೀಟಿದಾರರಿದ್ದಾರೆ. ಈ ಪೈಕಿ ಅಂತ್ಯೋದಯ ೯೪೨೮, ಬಿಪಿಎಲ್ ೧,೦೧,೨೪೭, ಎಪಿಎಲ್ ೩೭,೨೨೮ ಆಗಿದ್ದಾರೆ.
ಕಳೆದ ೪ ವರ್ಷಗಳಲ್ಲಿ ಹೊಸ ಪಡಿತರ ಚೀಟಿಗೆ ಒಟ್ಟು ೭,೭೮೧ ಅರ್ಜಿಗಳು ಆನ್‌ಲೈನ್ ಮೂಲಕ ಸ್ವೀಕಾರಗೊಂಡಿದ್ದು, ಸರಕಾರದಿಂದ ೬,೧೫೮ ಅರ್ಜಿ ಅನುಮೋದನೆ ಪಡೆದಿದೆ. ೪೯೬ ತಿರಸ್ಕೃತಗೊಂಡರೆ, ೧೧೨೭ ಬಾಕಿ ಉಳಿದುಕೊಂಡಿದೆ. ಸೆಪ್ಟೆಂಬರ್ ೨೦೨೩ರಲ್ಲಿ ೫೫೩ ಅರ್ಜಿಗಳನ್ನು ಅನುಮೋದಿಸಲು ಕೇಂದ್ರ ಕಚೇರಿ ಗುರಿ ನೀಡಿತ್ತು. ಈ ಪೈಕಿ ೫೨೯ ಅರ್ಜಿಗಳು ಅನುಮೋದನೆ ಪಡೆದುಕೊಂಡಿದೆ.