ಅನಿಲ್ ಎಚ್.ಟಿ.
ಇದು ಆಕಾಶವಾಣಿ.. ಮಡಿಕೇರಿ ಕೇಂದ್ರ.. ಕಂಪನಾAಕ ೧೦೩.೧ ಮೆಗಾ ಹರ್ಟ್ಸ್
ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನವೇ ಮಡಿಕೇರಿ ಬಾನುಲಿಯಲ್ಲಿ ಈ ಮಧುರ ಧ್ವನಿಯನ್ನು ಕೇಳತೊಡಗಿದರೆ ಅನೇಕರ ಪಾಲಿಗೆ ಅದೊಂದು ಆಹ್ಲಾದಕರ ದಿನದ ಪ್ರಾರಂಭ.
ಕೊಡಗಿನ ಆಕಾಶವಾಣಿ ಕೇಳುಗರು ೩ ದಶಕಗಳಿಂದ ಕೇಳುತ್ತಾ ಬಂದಿರುವ ಈ ಧ್ವನಿ ಸುಬ್ರಾಯ ಸಂಪಾಜೆಯವರದ್ದು. ಮಡಿಕೇರಿಯ ಬಾನುಲಿಯ ಈ ಧ್ವನಿ ಇದೇ ಭಾನುವಾರದಿಂದ ರೇಡಿಯೋದಲ್ಲಿ ಕಾರ್ಯಕ್ರಮಗಳ ತಾಜಾ ಮಾಹಿತಿಯೊಂದಿಗೆ ಕೇಳಿಬರುವುದಿಲ್ಲ. ತಾ. ೩೧ ರಂದು ಸುಬ್ರಾಯ ಸಂಪಾಜೆಯವರು ಆಕಾಶವಾಣಿ ಸೇವೆಯಿಂದ ನಿವೃತ್ತಿಯಾಗುತ್ತಿದ್ದು, ಬಾನುಲಿಯ ಉದ್ಘೋಷಕ ವೃತ್ತಿಗೆ ವಿದಾಯ ಹೇಳಲಿದ್ದಾರೆ.
೩೦ ವರ್ಷಗಳಿಂದ ಮಡಿಕೇರಿಯ ಬಾನುಲಿ ಮೂಲಕ ಕೊಡಗು ಮಾತ್ರವಲ್ಲದೇ ಪಕ್ಕದ ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಯ ಸುಬ್ರಾಯ ಸಂಪಾಜೆ ಧ್ವನಿ ಮೋಡಿ ಮಾಡಿತ್ತು. ಸ್ವಚ್ಛ ಉಚ್ಛಾರಣೆ, ಪ್ರತೀ ಕಾರ್ಯಕ್ರಮದಲ್ಲಿಯೂ ವಿಭಿನ್ನತೆ, ತನ್ನ ಜ್ಞಾನ ಭಂಡಾರವನ್ನು ರೇಡಿಯೋ ಕೇಳುಗರೊಂದಿಗೆ ಹಂಚಿಕೊಳ್ಳುತ್ತಿದ್ದ ರೀತಿ, ಕನ್ನಡದ ಹೊಸ ಪದಗಳ ಬಳಕೆ, ತಪ್ಪು ಪದಗಳ ಮಾಹಿತಿ.. ಹೀಗೆ ರೇಡಿಯೋ ಕೇಳುಗರಿಗೆ ಮನರಂಜನೆ ಜತೆ ಜತೆಗೇ ಜ್ಞಾನವನ್ನೂ ನೀಡುತ್ತಿದ್ದ ಸೊಗಸಾದ ಪದ ಸಂಪತ್ತು ಸುಬ್ರಾಯ ಸಂಪಾಜೆಯವರಲ್ಲಿತ್ತು. ಅದಕ್ಕೆ ತಕ್ಕಂತೆ, ಕೇಳುಗರನ್ನು ಸಮ್ಮೋಹನ ಮಾಡಬಲ್ಲಂಥ ಚಂದದ ಧ್ವನಿಯೂ ಸುಬ್ರಾಯರದ್ದಾಗಿತ್ತು.
ಸುಬ್ರಾಯ ಸಂಪಾಜೆ ನಡೆಸಿಕೊಡುವ ಕಾರ್ಯಕ್ರಮ ಎಂದರೆ ವಯಸ್ಸಿನ ಭೇದವಿಲ್ಲದೇ ಅನೇಕ ಕೇಳುಗರು ಬೇರೆಲ್ಲಾ ಕೆಲಸ ಮರೆತು ಅಥವಾ ಕೆಲಸದ ನಡುವೆ ರೇಡಿಯೋಕ್ಕೆ ಕಿವಿಯಾಗುತ್ತಿದ್ದರು. ತಲ್ಲೀನತೆಯಿಂದ, ಕೇಳುವಂಥ ಕಾರ್ಯಕ್ರಮಗಳಿಗೆ ಧ್ವನಿಯಾಗುತ್ತಿದ್ದ ಸುಬ್ರಾಯ ಸಂಪಾಜೆಯವರು ಕೇಳುಗರನ್ನು ಆ ಕಾರ್ಯಕ್ರಮದಲ್ಲಿ ತನ್ಮಯರಾಗಿಸುತ್ತಿದ್ದರು. ಪದಪುಂಜಗಳ ನಡುನಡುವೇ ಗಮಕ, ಹಾಡುಗಳ ಮನಮೋಹಕತೆಯೂ ಸುಬ್ರಾಯ ಸಂಪಾಜೆಯವರಿಗೆ ಸಿದ್ಧಿಸಿತ್ತು. ಸುಬ್ರಾಯ ಸಂಪಾಜೆಯವರ ಉದ್ಘೋಷಣೆ ಕೇಳಿದೊಡನೆ ನಮ್ಮೆಲ್ಲಾ ಕಷ್ಟಗಳು ಮರೆತಂತೆ ಭಾಸವಾಗಿ, ಹೊಸ ಉಲ್ಲಾಸ ಬರುತ್ತಿತ್ತು ಎಂದು ಅನೇಕ ಕೇಳುಗರು ಹೇಳುವುದರಲ್ಲಿ ಉತ್ಪೇಕ್ಷೆ ಇಲ್ಲ.
ಉದ್ಘೋಷಕರಾದ ಹಿನ್ನೆಲೆ
ಸುಬ್ರಾಯ ಸಂಪಾಜೆ ಪದವಿ ಶಿಕ್ಷಣ ಪಡೆದದ್ದೇ ಕನ್ನಡ ಉಪನ್ಯಾಸಕನಾಗಬೇಕೆಂದು. ಮುಂಗಾರು ಪತ್ರಿಕೆಯಲ್ಲಿ ೧೯೯೧ ರಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ ಬಳಿಕ ಅದೇ ವರ್ಷ ಕೊಡಗಿಗೆ ಬಂದು ಮರಗೋಡು ಭಾರತೀ ಜ್ಯೂನಿಯರ್ ಕಾಲೇಜಿಗೆ ಕನ್ನಡ ಉಪನ್ಯಾಸಕನಾಗಿ ಉದ್ಯೋಗ ಪ್ರಾರಂಭಿಸಿದರು. ಎರಡು ವರ್ಷಗಳ ಬಳಿಕ ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಾಗಿ ಕಾರ್ಯನಿರ್ವಹಿಸಿ ಆ ಬಳಿಕ ಉಡುಪಿ ಎಂ.ಜಿ.ಎA. ಕಾಲೇಜಿನಲ್ಲಿ ಒಂದು ವರ್ಷ. ಕೋಟ ವಿವೇಕ ಜೂನಿಯರ್ ಕಾಲೇಜಿನಲ್ಲಿ ಎರಡೂವರೆ ವರ್ಷ. ಉಪನ್ಯಾಸಕ ವೃತ್ತಿ ನಿರ್ವಹಿಸಿದರು. ಉದ್ಯೋಗ ಖಾಯಂ ಆಗದ ಹಿನ್ನೆಲೆಯಲ್ಲಿ ೧೯೯೩ ರಲ್ಲಿ ಮನಸ್ಸಿಲ್ಲದ ಮನಸಲ್ಲಿ ಮಡಿಕೇರಿಗೆ ಮರಳಿ ಬಂದು ಇಲ್ಲಿನ ಆಕಾಶವಾಣಿ ಸೇರಿಕೊಂಡ ಸುಬ್ರಾಯ ಸಂಪಾಜೆ, ಮೂರು ದಶಕಗಳಿಂದ ಇಲ್ಲಿನ ಧ್ವನಿಯಾಗಿದ್ದರು.
ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಉದ್ಘೋಷಕ. ಪ್ರಸಾರ ಕಾರ್ಯದ ಜೊತೆಗೆ ಇತರ ಕಾರ್ಯಕ್ರಮಗಳನ್ನು ಕೂಡ ನಿರ್ವಹಿಸುವ ಅವಕಾಶ ತನಗೆ ದೊರಕಿತ್ತು. ಡಿ.ಎಸ್. ನಾಗಭೂಷಣ, ಶ್ರೀನಿವಾಸ ಪ್ರಸಾದ್, ಉಮೇಶ್, ಜಿ.ಕೆ. ರವೀಂದ್ರಕುಮಾರ್, ಅಬ್ದುಲ್ ರಶೀದ್ ಅವರಂಥ ಘಟಾನುಘಟಿಗಳ ಸಹವಾಸ ಮಾಧ್ಯಮದ ಹೊಸ ಆಯಾಮವನ್ನು ತೋರಿಸಿಕೊಟ್ಟಿತ್ತು. ಇಂದಿರಾ ಏಸುಪ್ರಿಯ ಗಜರಾಜ್ ಅವರು ಮಡಿಕೇರಿ ಆಕಾಶವಾಣಿ ಕೇಂದ್ರದ ನಿರ್ದೇಶಕರಾಗಿ ಬಂದ ನಂತರವAತೂ ಅವರ ಕಾರ್ಯವೈಖರಿ "ಜನಸೇವೆಗಾಗಿಯೇ ನಾವಿರೋದು" ಎಂಬ ಹೊಸ ಎಚ್ಚರ ಮೂಡಿಸಿತು. ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸಿದ ಖ್ಯಾತಿ ಇಂದಿರಾ ಗಜರಾಜ್ ಅವರಿಗೆ ಸಲ್ಲಬೇಕು ಎಂದು ಸ್ಮರಿಸಿಕೊಂಡರು ಸುಬ್ರಾಯ ಸಂಪಾಜೆ.
ಕೊಡಗಿನ ಸೈನಿಕ ಪರಂಪರೆ, ಕ್ರೀಡೆ, ಸಂಸ್ಕೃತಿ, ಧಾರ್ಮಿಕ ಆಚರಣೆಗಳು, ಆದಿವಾಸಿ ಹಾಡಿಯ ಬದುಕು, ಇಲ್ಲಿಯ ಬಹು ಸಂಸ್ಕೃತಿ ಈ ಎಲ್ಲದರ ಬಗೆಗೂ ಆಕಾಶವಾಣಿ ತನ್ನ ಕಾರ್ಯಕ್ರಮಗಳ ಮೂಲಕ ಬೆಳಕು ಚೆಲ್ಲಿತು. ಸಮರಸದ ದೃಷ್ಟಿಕೋನ ಮತ್ತು ಅದನ್ನು ಪ್ರಸಾರದಲ್ಲಿ ಅಳವಡಿಸುವ ವಿಧಾನಕ್ಕೆ ಗಜರಾಜ್ ಒಂದು ಜೀವಂತ ರೂಪಕವಾಗಿದ್ದರು. ನನ್ನನ್ನು ಮತ್ತು ನನ್ನ ಸಹೋದ್ಯೋಗಿ ಶಾರದಾ ಅವರನ್ನು ಈ ಉದ್ದೇಶಕ್ಕೆ ಚೆನ್ನಾಗಿ ಪಳಗಿಸಿ ನಮ್ಮ ಸೇವಾಕಾರ್ಯಕ್ಕೆ ಹೊಸ ಮೆರುಗು ಕಲ್ಪಿಸಿದರು. ಕೊಡವ ಭಾಷೆಯ ಕಾರ್ಯಕ್ರಮಗಳನ್ನು ಶಾರದಾ ನಂಜಪ್ಪ ನಿರ್ವಹಿಸಿದರು. ಮಾತೃ ಭಾಷೆಯಷ್ಟೆ ನನಗೆ ಸಹಜವಾಗಿದ್ದ ಅರೆಭಾಷೆಯ ಕಾರ್ಯಕ್ರಮಗಳನ್ನು ನಾನು ಮಾಡಿದೆ. ಇದು ಆಕಾಶವಾಣಿ ನನಗೆ ನಿಯೋಜಿಸಿದ ಕೆಲಸ ಎಂದೂ ಸುಬ್ರಾಯರು ನುಡಿದರು.
ಅರೆಭಾಷೆಯ ಸುಮಾರು ನೂರಹತ್ತು ಭಕ್ತಿ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಲ್ಲದೇ ಕಟ್ರತನ ಲಲಿತಾ ಅಯ್ಯಣ್ಣ ಅವರು ಬರೆದ ಶ್ರೀ ವೆಂಕಟೇಶ್ವರ ಸುಪ್ರಭಾತವನ್ನು ಧ್ವನಿಮುದ್ರಿಸುವ ವಿಚಾರದಲ್ಲಿ ಪೂರ್ಣ ಮಾರ್ಗದರ್ಶನ ನೀಡಿದರು. ಗೌಡ ಸಾಂಸ್ಕೃತಿಕ ವಿಚಾರಗಳು ಮಡಿಕೇರಿ ಆಕಾಶವಾಣಿಯಲ್ಲಿ ಪ್ರಸಾರವಾಗಿರುವುದಕ್ಕೆ ಪೂರ್ಣ ಪ್ರಮಾಣದಲ್ಲಿ ಒತ್ತಾಸೆಯಾಗಿ ನಿಂತ ಸಮಾಧಾನ ತನಗಿದೆ ಎಂದೂ ಸುಬ್ರಾಯ ಸಂಪಾಜೆ ಹೇಳುತ್ತಾರೆ.
ಬಾನುಲಿಯ ಸೇವೆಯಲ್ಲಿ ಬಹಳ ಧನ್ಯತೆ ಕೊಟ್ಟ ಕ್ಷಣಗಳೆಂದರೆ ಭೂ ಕುಸಿತ ಮತ್ತು ಕೋವಿಡ್ ಸಂಕಷ್ಟದ ಕಾಲದಲ್ಲಿ ಸಹೋದ್ಯೋಗಿ ಕೂಪದಿರ ಶಾರದಾ ಅವರ ಜೊತೆಗೆ ಲೈವ್ ಕಾರ್ಯಕ್ರಮಗಳನ್ನು ನಡೆಸಿ ಜನರ ನೋವಿಗೆ ಸ್ಪಂದಿಸಿದ ದಿನಗಳು! ಪತ್ರಿಕೆ, ಟಿ.ವಿ. ಮತ್ತಿತರ ಮಾಧ್ಯಮಗಳೂ ಜನರಿಗೆ ತಲುಪದ ದಿನಗಳವು. ಜಿಲ್ಲಾಡಳಿತದ ನೆರವಿನೊಂದಿಗೆ ಆಕಾಶವಾಣಿ ಮಾಡಿದ ಸಾರ್ಥಕ ಸೇವೆಯಲ್ಲಿ ನನ್ನದೂ ಕಿಂಚಿತ್ ಪಾಲಿದೆ ಎನ್ನುವುದು ನನಗೆ ಜೀವನ ಸಾರ್ಥಕ್ಯ ತಂದುಕೊಟ್ಟ ವಿಚಾರ ಎಂದೂ ಅವರು ಸ್ಮರಿಸಿಕೊಂಡರು.
ಭಾರತದ ಯಾವ ಆಕಾಶವಾಣಿ ಕೇಂದ್ರವೂ ಸಿದ್ಧಪಡಿಸದಷ್ಟು ರೇಡಿಯೋ ಸಂದೇಶಗಳನ್ನು (ಜಿಂಗಲ್ಸ್) ಸಿದ್ಧಪಡಿಸಿದ್ದು ಆಕಾಶವಾಣಿ ಮಡಿಕೇರಿ ಕೇಂದ್ರ ಎಂದು ಹೇಳಿದ ಸುಬ್ರಾಯ ಸಂಪಾಜೆ, ಸುಮಾರು ಮುನ್ನೂರ ಐವತ್ತು ರೇಡಿಯೋ ಜಿಂಗಲ್ಸ್ ಆಕಾಶವಾಣಿಯ ಸಂಗ್ರಹದಲ್ಲಿದೆ. ಇದಕ್ಕಾಗಿ ಸುಬ್ರಾಯ ಸಂಪಾಜೆಯವರಿಗೆ ೨೦೧೫ರಲ್ಲಿ ರಾಜ್ಯಮಟ್ಟದ ಪುರಸ್ಕಾರ ಲಭಿಸಿತು. ಮಡಿಕೇರಿ ಕೇಂದ್ರದಲ್ಲಿ ಇವರು ಸಿದ್ಧಪಡಿಸಿದ ಈ ಎಲ್ಲ ಸಂದೇಶಗಳನ್ನು ಈಗ ಬೆಂಗಳೂರು ನಿಲಯವು ಸಾಂದರ್ಭಿಕವಾಗಿ ಪ್ರಸಾರ ಮಾಡುತ್ತಿದೆ. ಈ ಮೂಲಕ ನಿವೃತ್ತಿಯ ನಂತರವೂ ನನ್ನ ಹಾಗೂ ನನ್ನ ಸಹೋದ್ಯೋಗಿಗಳ ಧ್ವನಿ ಬಾನುಲಿಯಲ್ಲಿ ನಿತ್ಯ ಉಳಿಯುವಂತೆ, ಉಲಿಯುವಂತೆ ಮಾಡಿದ ಕೃತಕೃತ್ಯತೆ ನನ್ನ ಪಾಲಿನದು.
ಆಕಾಶವಾಣಿ ವೃತ್ತಿಯ ಜೊತೆಗೆ ಉಸಿರಾಟದಂತೆ ಸುಬ್ರಾಯ ಸಂಪಾಜೆಯವರಿಗೆ ಬೆಸೆದದ್ದು ಗಮಕ ಕಲೆ ಮತ್ತು ಯಕ್ಷಗಾನ ಹಾಡುಗಾರಿಕೆ. ಯಕ್ಷಗಾನ ಭಾಗವತನಾಗಿ ಮಂಗಳೂರು, ಉಡುಪಿ, ಮುಂಬಯಿ, ಮೈಸೂರು, ಬೆಂಗಳೂರು ಇಲ್ಲೆಲ್ಲ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಯಕ್ಷಗಾನ ಹಾಡುಗಾರಿಕೆಯಲ್ಲಿ ಹೊಸ ಅಲೆ ಸೃಷ್ಟಿಯಾಗಿ ಬಹಳ ಬದಲಾವಣೆ ಆಗಿದ್ದರೂ ಸಂಪ್ರದಾಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಇಂದಿಗೂ ತನ್ನ ಗಾಯನ ಶೈಲಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಈ ಕಾರಣಕ್ಕಾಗಿಯೇ ಡಾ.ಎಂ. ಪ್ರಭಾಕರ ಜೋಶಿ, ವಿದ್ವಾನ್ ಉಮಾಕಾಂತ ಭಟ್ಟ, ಕಬ್ಬಿನಾಲೆ ವಸಂತ ಭಾರದ್ವಾಜ್, ಡಾ. ರಮಾನಂದ ಬನಾರಿಯವರಂಥ ವಿದ್ವಾಂಸರು ತನ್ನ ಹಾಡಿನ ಶೈಲಿಯ ಬಗ್ಗೆ ಬಹಳ ಸಮಾಧಾನ- ಸಂತೋಷದ ಮೆಚ್ಚುಗೆ ಸೂಚಿಸಿದ್ದಾರೆ ಎಂಬ ತೃಪ್ತಿ ಸುಬ್ರಾಯರದ್ದು.
ಬರವಣಿಗೆ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ ಸುಬ್ರಾಯ ಸಂಪಾಜೆ ಪುಟ್ಟಕ್ಕ (ಕಿರು ಕಾದಂಬರಿ), ರಸ ರಾಮಾಯಣ, ಪುರಾಣಯಾನ ಮತ್ತು ಕೊಡಗು ಕ್ವಿಝ್ ಇವು ನಾನು ಬರೆದ ಕೃತಿಗಳು. ಇದರಲ್ಲಿ ಪುರಾಣಯಾನ ಗ್ರಂಥವು ಪುರಾಣದ ಆಸಕ್ತರಿಗೆ ಮತ್ತು ಕಲಾವಿದರಿಗೆ ಒಂದು ಪರಾಮರ್ಶನ ಗ್ರಂಥ.
ಕೊಡಗಿನ ಬಗೆಗಿನ ವಿಚಾರಾಸಕ್ತರಿಗೆ ಆಕರ ಕೃತಿಯಾಗಿದೆ
ರೇಡಿಯೋ ಮಾಧ್ಯಮ, ಯಕ್ಷಗಾನ ಮತ್ತು ಬರವಣಿಗೆ ಇವು ಮೂರು ನನಗೆ ನೆಲೆ ಮತ್ತು ಸಂತೋಷ ಒದಗಿಸಿದ ಕ್ಷೇತ್ರಗಳು. ಮಾಡಿದ ಸೇವೆಗೆ ಅಯಾಚಿತವಾಗಿ ಪ್ರತಿಫಲ ಕೂಡ ಲಭಿಸಿದೆ. ನನಗೆ ಇದೊಂದು ಬೆರಗು. ಈ ಸಾಲಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆದಾಗ ಪುರಾಣಯಾನ ಕೃತಿ ರಚನೆಗಾಗಿ ನನಗೆ ಸನ್ಮಾನ ನಡೆಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನನ್ನನ್ನು ಆರಿಸಿದ ಬಗ್ಗೆ ನನಗಿರುವ ಎದೆಹಿಗ್ಗನ್ನು ಎಷ್ಟೆಂದರೂ ತೀರದು. ಎಲ್ಲವೂ ಸಹಜವಾಗಿ ಒಲಿದು ಬಂದುದು ಎಂಬ ವಿನಮ್ರ ನುಡಿಗಳು ಸುಬ್ರಾಯರದ್ದು.
ರೇಡಿಯೋ ಮಾಧ್ಯಮ ಶಕ್ತಿಹೀನವಾಗದಂತೆ ಜಿಲ್ಲೆಯ ಪ್ರಜ್ಞಾವಂತ ಜನತೆ ಜಾಗೃತರಾಗಬೇಕು. ಜೋಪಾನವಾಗಿ ಈ ಮಾಧ್ಯಮವನ್ನು ಕಾಪಿಟ್ಟು ಮುಂದೆ ಕೊಂಡೊಯ್ಯಬೇಕು. ಇಲ್ಲಿಯ ಬಹುಮುಖೀ ಸಂಸ್ಕೃತಿ ಸೌಹಾರ್ದತೆಗೆ ಎಳ್ಳಷ್ಟೂ ಚ್ಯುತಿ ಬರಬಾರದು. ಇದು ತನ್ನ ಅಂತರAಗದ ಆಶಯ ಎನ್ನುತ್ತಾರೆ ಸುಬ್ರಾಯ ಸಂಪಾಜೆ.