ಸಿದ್ದಾಪುರ, ಮೇ ೨೭: ಚಿರತೆ ದಾಳಿಗೆ ಸಿಲುಕಿ ಹಾಲು ಕರೆಯುವ ಹಸು ಮೃತಪಟ್ಟಿರುವ ಘಟನೆ ಮಾಲ್ದಾರೆ ಗ್ರಾಮದ ಆಸ್ಥಾನ ಎಂಬಲ್ಲಿ ಸಂಭವಿಸಿದೆ.
ಮಾಲ್ದಾರೆ ಗ್ರಾಮದ ನಿವಾಸಿ ಹೆಚ್.ಸಿ. ಮಾಲ ಎಂಬವರಿಗೆ ಸೇರಿದ ಹಾಲು ಕರೆಯುವ ಹಸು ಮೇಯುತ್ತಿದ್ದ ಸಂದರ್ಭ ಚಿರತೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡಿದ್ದ ಹಸು ಮಂಗಳವಾರದAದು ಸಾವನ್ನಪ್ಪಿದೆ. ಈ ಬಗ್ಗೆ ಹಸುವಿನ ಮಾಲೀಕರು ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶು ವೈದ್ಯಾಧಿಕಾರಿ ನವೀನ್ ಅವರು ಮರಣೋತ್ತರ ಪರೀಕ್ಷೆ ನಡೆಸಿದರು.
ಕಳೆದ ಒಂದು ತಿಂಗಳ ಹಿಂದೆ ಬಾಡಗ - ಬಾಣಂಗಾಲ ವ್ಯಾಪ್ತಿಯಲ್ಲಿ ಹುಲಿ ದಾಳಿ ನಡೆಸಿ ಮೂರು ಹಸುಗಳನ್ನು ಕೊಂದು ಹಾಕಿತ್ತು. ಇದೀಗ ಚಿರತೆ ದಾಳಿಯಿಂದಾಗಿ ಹಾಲು ಕರೆಯುವ ಹಸು ಕಳೆದುಕೊಂಡಿರುವ ಮಾಲೀಕರು ತಮ್ಮ ಜೀವನ ಮಾಡಲು ಸಮಸ್ಯೆ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ವನ್ಯಪ್ರಾಣಿಗಳ ಹಾವಳಿಯಿಂದಾಗಿ ಹೈನುಗಾರಿಕೆ ಮಾಡಿಕೊಂಡು ಜೀವನ ಮಾಡುತ್ತಿರುವ ರೈತರಿಗೆ ಸಂಕಷ್ಟ ಎದುರಾಗಿದೆ. ಎಂದು ಗ್ರಾಮಸ್ಥರು ತಿಳಿಸಿದ್ದಾರೆ.