ಮಡಿಕೇರಿ, ಮೇ ೨೭: ಮಡಿಕೇರಿ ತಾಲೂಕಿನ ವಿವಿಧೆಡೆ ಕಾಫಿ ಕಳವು ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗು ಜಿಲ್ಲಾ ಪೊಲೀಸರು ಮೂವರು ಚೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹಾಕತ್ತೂರು ಗ್ರಾಮ ನಿವಾಸಿ ಎ.ಎಂ. ಅಬ್ಬಾಸ್ ಎಂಬವರು ದಾಸ್ತಾನಿರಿಸಿದ್ದ ೧೩ ಚೀಲ ಒಣಗಿದ ಕಾಫಿ, ಹೊಸ್ಕೇರಿ ಗ್ರಾಮ ನಿವಾಸಿ ಬಿ.ಡಿ. ಲವಿನ್ ಅವರ ಗೋದಾಮಿನಿಂದ ೫ ಚೀಲ ಹಾಗೂ ಮೇಕೇರಿ ಗ್ರಾಮ ನಿವಾಸಿ ದಿಗಂತ್ ಅವರ ಗೋದಾಮಿನಿಂದ ೧೫ ಚೀಲ ಕಾಫಿಯನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿ ತನಿಖೆ ಕೈಗೊಂಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಪಿ.ಎ. ಸೂರಜ್ ನೇತೃತ್ವದಲ್ಲಿ ತನಿಖೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಸುಂಟಿಕೊಪ್ಪ ಗ್ರಾಮ ನಿವಾಸಿ ಎಲ್. ಮಹೇಶ್ (೪೪), ಮದೆ ಗ್ರಾಮ ನಿವಾಸಿ ಕೆ.ಆರ್. ವಿನೋದ್ (೩೯) ಹಾಗೂ ೨ನೇ ಮೊಣ್ಣಂಗೇರಿ ನಿವಾಸಿ ಕೆ.ಎಂ. ರಾಮಯ್ಯ (೨೮) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿAದ ೩೧ ಚೀಲ ಕಾಫಿ, ಒಂದು ಮಾರುತಿ ಈಕೋ ವಾಹನ, ರಾಡ್ ಕಟ್ಟರ್, ಕಬ್ಬಿಣದ ಹಾರೆಯನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾಧಿಕಾರಿಗಳಾದ ಹೆಚ್.ವಿ. ಚಂದ್ರಶೇಖರ್, ಹೆಚ್.ಈ ವೆಂಕಟ್, ಅಪರಾಧ ಪತ್ತೆದಳ, ಡಿಸಿಆರ್‌ಬಿ ಸಿಬ್ಬಂದಿಗಳು, ತಾಂತ್ರಿಕ ಘಟಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು.