ಶನಿವಾರಸಂತೆ, ಮೇ ೨೭: ವಿಶ್ವಕರ್ಮ ಸಮಾಜ ಹಾಗೂ ಶ್ರೀಕಾಳಿಕಾಂಬ ದೇವಾಲಯ ಸಮಿತಿ ವತಿಯಿಂದ ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಶ್ರೀಕಾಳಿಕಾಂಬ ದೇವಾಲಯದ ೧೦ನೇ ವರ್ಷದ ವಾರ್ಷಿಕೋತ್ಸವ, ಸಾಮೂಹಿಕ ಉಪನಯನ ಹಾಗೂ ಶ್ರೀಕಾಳಿಕಾಂಬ ದೇವಿಗೆ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ದೇವಾಲಯ ಆವರಣದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.

ಹಾಸನದ ಪುರೋಹಿತ ಹೆಚ್.ಡಿ. ಪ್ರದೀಪ್ ಶರ್ಮ, ಕಾಳಿಕಾಂಬ ದೇವಸ್ಥಾನದ ಪುರೋಹಿತ ಮುಳ್ಳೂರು ಶರತ್ ಹಾಗೂ ತಂಡದವರ ನೇತೃತ್ವದಲ್ಲಿ ಗಣಪತಿ ಪೂಜೆ, ಪುಣ್ಯಾಹ, ಸ್ವಸ್ತಿವಾಚನ, ಪವಮಾನ ಶಾಂತಿ, ಇತರೆ ಧಾರ್ಮಿಕ ಕೈಂಕರ್ಯಗಳು ನೆರವೇರಿತು

ಭಾನುವಾರ ಮುಂಜಾನೆಯಿAದ ಗಣಪತಿ ಪೂಜೆ, ಪುಣ್ಯಾಹ, ದೇವತಾ ನಾಂದಿ, ಅಂಕುರಾರ್ಪಣ ಪೂಜೆ, ದೇವಿಗೆ ಅಭಿಷೇಕ, ನವಗ್ರಹ ಪೂಜೆ, ಗಣಪತಿ ಹೋಮ ಹಾಗೂ ವಿಶ್ವಕರ್ಮ ಹೋಮ ನಡೆದವು.

ನಂತರ ಸಾಮೂಹಿಕ ಉಪನಯನ, ಬ್ರಹ್ಮೋಪದೇಶ, ಲೋಕ ಕಲ್ಯಾಣಾರ್ಥವಾಗಿ ಮಹಿಳೆಯರಿಂದ ದೇವಿಗೆ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಮಧ್ಯಾಹ್ನ ದೇವಿಗೆ ಮಹಾಮಂಗಳಾರತಿ ನಡೆದು, ತೀರ್ಥ-ಪ್ರಸಾದ ವಿನಿಯೋಗವಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಪೂಜಾ ಕಾರ್ಯಕ್ರಮಗಳಲ್ಲಿ ಸಾನಿಧ್ಯ ವಹಿಸಿದ್ದು; ಆಶೀರ್ವಚನ ನೀಡಿದರು.

ಶನಿವಾರಸಂತೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಶ್ರೀ ಕಾಳಿಕಾಂಬ ದೇವಾಲಯ ಸಮಿತಿ ಅಧ್ಯಕ್ಷ ಬಿ.ಬಿ. ನಾಗರಾಜ್ ಹಾಗೂ ಕಾರ್ಯಕಾರಿ ಮಂಡಳಿ ನಿರ್ದೇಶಕರು, ಸದಸ್ಯರು ಹಾಜರಿದ್ದರು.