ಸೋಮವಾರಪೇಟೆ, ಮೇ ೨೪: ಪಟ್ಟಣ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ಹಲವು ಕಾಮಗಾರಿಗಳು ಮಳೆಯಿಂದಾಗಿ ಸ್ಥಗಿತಗೊಂಡಿದ್ದರೂ, ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ ಯಾವುದೇ ಅಡೆತಡೆಯಿಲ್ಲದೇ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆ ಮುಖ್ಯಾಧಿಕಾರಿಗಳು ಕಾಮಗಾರಿ ಸ್ಥಗಿತಕ್ಕೆ ಸೂಚಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಳೆ ಸುರಿಯುವಾಗ ಕಾಮಗಾರಿ ನಿಲ್ಲಿಸುವುದನ್ನು ಬಿಟ್ಟು, ಮಳೆಯಲ್ಲಿಯೇ ಕಾಮಗಾರಿ ಮಾಡಲಾಗುತ್ತಿದೆ. ಚರಂಡಿಯಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದು, ಚರಂಡಿಗೆ ಬಳಸಿರುವ ಸೀಮೆಂಟ್ ಕೊಚ್ಚಿಕೊಂಡು ಹೋಗುತ್ತಿದ್ದರೂ, ಕಾಮಗಾರಿಯನ್ನು ಕಾರ್ಮಿಕರು ಮುಂದುವರೆಸಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತವಾದ ನಂತರ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸತೀಶ್ ಮಾತನಾಡಿ, ತಕ್ಷಣ ಕಾಮಗಾರಿ ನಿಲ್ಲಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಮಳೆ ನಿಂತ ನಂತರ ಕಾಮಗಾರಿ ಮುಂದುವರೆಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.