ತಹಶೀಲ್ದಾರ್ ಕಿರಣ್ ಗೌರಯ್ಯ

ಸಿದ್ದಾಪುರ, ಮೇ ೨೨: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾಗೂ ಭೂ ಕುಸಿತ ಸಂಭವಿಸುವ ಸೂಕ್ಷö್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಕುಶಾಲನಗರ ತಾಲೂಕಿನ ವ್ಯಾಪ್ತಿಯ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವಾಹದ ಸಂದರ್ಭದಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲು ಜಾಗವನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ, ಕಣಿವೆ, ವಾಲ್ನೂರು, ಚೆಟ್ಟಳ್ಳಿ, ಗುಡ್ಡೆಹೊಸೂರು ಹಾಗೂ ನೆಲ್ಲಿಹುದಿಕೇರಿ. ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ತಾಲೂಕಿನ ವ್ಯಾಪ್ತಿಯ ೧೨ ಪರಿಹಾರ ಕೇಂದ್ರವನ್ನು ಗುರುತಿಸಲಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಪ್ರವಾಹ ಪೀಡಿತ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲು ಹಾಗೂ ಪ್ರವಾಹದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆಯ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು ಸೇರಿದಂತೆ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದೆ ಎಂದು ವಿವರಿಸಿದ ಅವರು ಪರಿಹಾರ ಕೇಂದ್ರಗಳಿಗೆ ಪ್ರವಾಹ ಪೀಡಿತ ವ್ಯಾಪ್ತಿಗೊಳಪಡುವ ಗ್ರಾಮಗಳ ಸರ್ಕಾರಿ ಶಾಲೆಗಳನ್ನು ಹಾಗೂ ಸಮುದಾಯ ಭವನಗಳನ್ನು ಗುರುತಿಸಲಾಗಿದೆ ಎಂದು ಕಿರಣ್ ಗೌರಯ್ಯ ತಿಳಿಸಿದರು.

ಈಗಾಗಲೇ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ಪರಿವೀಕ್ಷಕರು ತಹಶೀಲ್ದಾರ್ ಸಮ್ಮುಖದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು. ಮಳೆಗಾಲದಲ್ಲಿ ಪ್ರವಾಹ ಪೀಡಿತ ಪ್ರದೇಶದ ನಿವಾಸಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತದ ಆದೇಶದ ಮೇರೆಗೆ ಮುಂದಿನ ದಿನಗಳಲ್ಲಿ ನೋಟಿಸ್ ಜಾರಿ ಮಾಡಲಾಗುವುದೆಂದು ತಿಳಿಸಿದರು.