ಕಣಿವೆ, ಮೇ ೨೧: ದೇವಾಲಯಗಳು ಸಮಸ್ತ ಜನಕೋಟಿಗೆ ಶಾಂತಿ ಹಾಗು ನೆಮ್ಮದಿಯನ್ನು ನೀಡುವ ಪವಿತ್ರ ಕ್ಷೇತ್ರಗಳು ಎಂದು ಶ್ರೀ ಕಾಂತಾನAದ ಸರಸ್ವತಿ ಸ್ವಾಮೀಜಿ ಹೇಳಿದರು.
ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಲೋಕ ಕಲ್ಯಾಣದ ಹಿತದೃಷ್ಟಿಯಿಂದ ಶ್ರೀ ಶ್ರೀಕಾಂತಾನAದ ಸರಸ್ವತಿ ಮಹಾರಾಜ್ ನೇತೃತ್ವದಲ್ಲಿ ದೇಶದಲ್ಲಿ ಕೋಟಿಗೂ ಅಧಿಕ ರುದ್ರ ಜಪ ಪಾರಾಯಣ ಕಾರ್ಯಕ್ರಮದ ಭಾಗವಾಗಿ ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದವರೆಗೂ ಜಪಯಜ್ಞ ಧಾರ್ಮಿಕ ಕಾರ್ಯಕ್ರಮ ಕಣಿವೆಯಲ್ಲಿ ಜರುಗಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಋತ್ವಿಜರು ನಿರಂತರವಾಗಿ ಜಪ ಪಾರಾಯಣ ಮಾಡುವ ಮೂಲಕ ಭಕ್ತಿ ಭಾವ ಮೆರೆದರು.
ದೇಶದಲ್ಲಿ ಹಾಗೂ ವಿಶ್ವದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾನವರಲ್ಲಿ ಅಶಾಂತಿ, ಅತೃಪ್ತಿ, ಅಸಹನೆ ನಿರಂತರವಾಗಿದೆ. ಹಾಗಾಗಿ ಮನುಷ್ಯ ಮನುಷ್ಯರಲ್ಲಿ ದ್ವೇಷ, ಅಸೂಯೆ, ಮತ್ಸರಗಳು ನಡೆಯುತ್ತಿವೆ. ಹಾಗಾಗಿ ಮಾನವ ಕುಲ ಹಾಗೂ ಸಮಸ್ತ ಜೀವ ಸಂಕುಲ ನೆಮ್ಮದಿ ಹಾಗೂ ಶಾಂತಿಯಿAದ ಬದುಕಲು ಪರಮಾತ್ಮನ ಅನುಗ್ರಹ ಬೇಕಿದೆ. ಆದ್ದರಿಂದ ಭಗವಂತನನ್ನು ಸ್ಮರಿಸುವ ಮತ್ತು ಲೋಕದಲ್ಲಿ ನಡೆಯುತ್ತಿರುವ ಅಹಿತಕರ ಘಟನಾವಳಿಗಳ ನಿಯಂತ್ರಣಕ್ಕಾಗಿ ಮತ್ತು ಮನುಷ್ಯರ ನಡುವೆ ಪರಸ್ಪರ ಪ್ರೀತಿ, ಸಹಬಾಳ್ವೆ ನೆಲೆಸುವಂತೆ ಮಾಡಲು ಇಂತಹ ಯಜ್ಞ, ಜಪ ಪಾರಾಯಣಗಳನ್ನು ನಡೆಸಲಾಗುತ್ತಿದೆ. ೨೦೩೦ ರ ವರೆಗೂ ಕೋಟಿ ಯಜ್ಞ ಜಪ ಪಾರಾಯಣ ನಿರಂತರವಾಗಿ ನಡೆಯಲಿದೆ ಎಂದು ಸ್ವಾಮೀಜಿ ವಿವರಿಸಿದರು.
ದೇವಾಲಯದಲ್ಲಿ ಶ್ರೀ ರಾಮಲಿಂಗೇಶ್ವರ ದೇವರಿಗೆ ಬಗೆ ಬಗೆಯ ಪುಷ್ಪಗಳಿಂದ ವಿಶೇಷವಾದ ಅಲಂಕಾರ ಹಾಗೂ ಪೂಜೆ ದೇಗುಲದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಅವರಿಂದ ನಡೆಯಿತು. ಬಳಿಕ ದೇವಾಲಯದ ಆವರಣದಲ್ಲಿ ದೇವತಾ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್ ಉಪಸ್ಥಿತಿಯಲ್ಲಿ ಚಂಡಿಕಾ ಹೋಮ ಜರುಗಿತು.
ಕಾರ್ಯಕ್ರಮದಲ್ಲಿ ಅಧಿಕ ರುದ್ರಜಪ ಯಜ್ಞ ಸಮಿತಿಯ ಗೌರವಾಧ್ಯಕ್ಷ ಮಿತ್ತೂರು ಈಶ್ವರ ಭಟ್, ಕಾರ್ಯಾಧ್ಯಕ್ಷ ಮಡಿಕೇರಿಯ ರಮೇಶ್ ಹೊಳ್ಳ, ಉಪಾಧ್ಯಕ್ಷ ಎಸ್. ಎಸ್.ಸಂಪತ್ ಕುಮಾರ್, ನಿರ್ದೇಶಕ ಬಿ.ಸಿ.ದಿನೇಶ್,ಶ್ರೀಧರ್ ನೆಲ್ಲಿತ್ತಾಯ, ನಾಗೇಂದ್ರ ಬಾಬು ವಕೀಲರು, ಎಸ್. ಡಿ.ವಿಜೇತ, ಕಣಿವೆ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯದರ್ಶಿ ಕೆ.ಎಸ್.ಮಾಧವ, ಮಂಜುನಾಥ್, ಲೋಕೇಶ್, ನವೀನ್, ಹುಲುಸೆ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಎಸ್. ಮಹೇಶ್, ಈ. ಎಸ್. ಗಣೇಶ್, ಮಧು ಮತ್ತು ಗ್ರಾಮಸ್ಥರು ಇದ್ದರು. ಇದೇ ಸಂದರ್ಭ ದೇವಾಲಯ ಸಮಿತಿಯಿಂದ ಶ್ರೀ ಕಾಂತಾನAದ ಮಹಾರಾಜ್ ಅವರ ಪಾದಪೂಜೆ ನೆರವೇರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಕಣಿವೆ, ಹುಲುಸೆ ಮೊದಲಾದ ಗ್ರಾಮಗಳ ಸಮಸ್ತ ಭಕ್ತಾದಿಗಳಿಗೆ ಪ್ರಸಾದ ಅನ್ನಸಂತರ್ಪಣೆ ನೆರವೇರಿಸಲಾಯಿತು.