ವೀರಾಜಪೇಟೆ, ಮೇ ೧೮: ಹಲವು ವರ್ಷಗಳ ಹಿಂದೆ ಅಂದಿನ ಸರಕಾರಗಳು ಏಕಪಕ್ಷೀಯವಾಗಿ ಜನರ ವಾಸ ಸ್ಥಳಗಳನ್ನು ಅರಣ್ಯಕ್ಕೆ ಕೊಟ್ಟಿರುವುದಾಗಿ ವಿವೇಚನೆ ಇಲ್ಲದೆ ಘೋಷಿಸಿದ್ದವು. ನಂತರ ಅಲ್ಲಿನ ನಿವಾಸಿಗಳಿಗೆ ಸೌಲಭ್ಯಗಳನ್ನು ನೀಡಿದರು. ಈಗ ಅವರಿಗೆ ಸರಕಾರ ನೋಟಿಸ್ ಕೊಟ್ಟು ಒಕ್ಕಲೆಬ್ಬಿಸುವುದು, ಅವರ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿರುವುದು ಖಂಡನಾರ್ಹವಾಗಿದೆ ಎಂದು ಕರ್ನಾಟಕ ಕಾಫಿ ರೈತರ ಸಂಘದ ಕೊಡಗು ಘಟಕದ ಮುಖಂಡ ಡಾ. ದುರ್ಗಾಪ್ರಸಾದ್ ಹೇಳಿದರು.

ಪಟ್ಟಣದಲ್ಲಿರುವ ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ರೈತರ ವಶದಲ್ಲಿರುವ ಭೂಮಿಯನ್ನು ಅರಣ್ಯಕ್ಕೆಂದು ವಶಪಡಿಸಿಕೊಳ್ಳುವ ಪ್ರಕ್ರಿಯೆ ಸಂಬAಧ ಸೋಮವಾರಪೇಟೆಯ ಕಲ್ಕಂದೂರು ಗ್ರಾಮಕ್ಕೆ ಅರಣ್ಯ ಖಾತೆಯ ಸಿಬ್ಬಂದಿಗಳು ಜಾಗವನ್ನು ಸರ್ವೆ ನಡೆಸಲು ಹೋಗಿರುವುದನ್ನು ರೈತರು ತಡೆದಿದ್ದಾರೆ. ಈ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಹಿಂದೆ ಸ್ವಾತಂತ್ರö್ಯಕ್ಕೆ ಪೂರ್ವದಲ್ಲಿ ೭೫೦೦ ಎಕರೆ ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ಲೀಸ್‌ಗೆ ಕೊಡಲಾಗಿತ್ತು. ಆ ಜಾಗದಲ್ಲಿ ಕಾಫಿ, ರಬ್ಬರ್, ಚಹಾ ಗಿಡಗಳ ತೋಟಗಳನ್ನು ಮಾಡಲಾಗಿದೆ. ಆದರೆ ಅವಧಿ ಮುಗಿದಿದೆ ಎಂದು ಅಧಿಕಾರಿಗಳು ನೋಟಿಸ್ ನೀಡಿದಾಗ ಲೀಸ್ ಅವರು ನ್ಯಾಯಾಲಯವನ್ನು ಪ್ರವೇಶಿಸಿ ತಮಗೆ ೯೯೯ ವರ್ಷಗಳಲ್ಲಿ ಲೀಸಿಗೆ ಕೊಟ್ಟಿರುವುದಾಗಿ ವಾದ ಮಂಡಿಸಿದಾಗ, ಅದನ್ನು ಅಲ್ಲಗಳೆದು ನ್ಯಾಯಾಲಯ ೯೯ ವರ್ಷವೆಂದು ಒಪ್ಪಿಕೊಂಡಿದ್ದು, ಈಗ ಲೀಸ್‌ಗೆ ಕೊಟ್ಟ ೭,೫೦೦ ಎಕರೆ ಜಾಗವನ್ನು ಹಿಂದಕ್ಕೆ ಪಡೆಯಬೇಕಿದೆ. ಇದರಿಂದ ಅರಣ್ಯದ ವ್ಯಾಪ್ತಿ ಹೆಚ್ಚುತ್ತದೆ ಎಂದು ತಿಳಿಸಿದ ಡಾ. ದುರ್ಗಾಪ್ರಸಾದ್ ಅವರು ಕೊಡಗಿನಲ್ಲಿರುವ ಪೈಸಾರಿ ಜಾಗಗಳನ್ನು ಸಮಗ್ರ ಸರ್ವೆ ನಡೆಸಬೇಕು. ಒತ್ತುವರಿ ಮಾಡಿದವರ ಪಟ್ಟಿಯನ್ನು ಜಿಲ್ಲಾಡಳಿತ ತಯಾರಿಸಬೇಕು ಎಂದರು.

ಕರ್ನಾಟಕ ಕಾಫಿ ರೈತರ ಸಂಘದ ಜಿಲ್ಲಾ ಘಟಕದ ವಸಂತ್ ಕುಮಾರ್ ಹೊಸಮನೆ ಮಾತನಾಡಿ, ಈ ಹಿಂದೆ ೨೦೧೯ ರಲ್ಲಿ ಧನಂಜಯ ವರ್ಸಸ್ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಡೀಮ್ಡ್ ಫಾರೆಸ್ಟ್ ಕುರಿತಂತೆ ಹೈ ಕೋರ್ಟ್ನ ವಿಭಾಗೀಯ ಪೀಠ ಸ್ಪಷ್ಟ ತೀರ್ಪು ನೀಡಿದೆ. ಹಾಗಾಗಿ ಮತ್ತೆ ಈ ವಿಚಾರದಲ್ಲಿ ನ್ಯಾಯಾಲಯ ವ್ಯಾಖ್ಯಾನ ನೀಡುವ ಅಗತ್ಯವಿಲ್ಲ, ಹಿಂದಿನ ಆದೇಶದಂತೆ ಅರಣ್ಯ ಮತ್ತು ಅರಣ್ಯ ಭೂಮಿ ಎಂಬುವುದು ಕಾಯಿದೆಯಲ್ಲಿ ಉಲ್ಲೇಖವಿದೆ, ಆದರೆ ಡೀಮ್ಡ್ ಅರಣ್ಯ ಎಂಬ ಉಲ್ಲೇಖ ಕಾಯಿದೆಯಲ್ಲಿ ಎಲ್ಲೂ ಇಲ್ಲ. ಆದ್ದರಿಂದ ಇದನ್ನು ಮಾನ್ಯ ಮಾಡಲಾಗದು ಎಂದು ವಿಭಾಗೀಯ ಪೀಠ ಹೇಳಿತ್ತು ಎಂದರು.

ಈ ಸಂದರ್ಭ ರೈತ ಸಂಘದ ಜಿಲ್ಲಾ ಸದಸ್ಯ ಹಮೀದ್, ಸದಸ್ಯರು ಉಪಸ್ಥಿತರಿದ್ದರು.