ವೀರಾಜಪೇಟೆ, ಮೇ ೧೬ : ಸಮೀಪದ ಬೇಟೋಳಿ ರಾಮನಗರದ ಶ್ರೀ ಪುದುಪಾಡಿ ಅಯ್ಯಪ್ಪ ಸಭಾಭವನದಲ್ಲಿ ಇದೇ ಮೊದಲ ಬಾರಿಗೆ ಮಕ್ಕಳ ವೈದಿಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶ್ರೀ ಗಣಪತಿ ಹಾಗೂ ಶ್ರೀ ಪುದುಪಾಡಿ ಅಯ್ಯಪ್ಪ ದೇವಸ್ಥಾನದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಪುರೋಹಿತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪುದುಪಾಡಿ ಅಯ್ಯಪ್ಪ ದೇವಸ್ಥಾನದ ಉಪಾಧ್ಯಕ್ಷ ಬಿ.ಜಿ. ನಂದ ಬೋರ್ಕರ್ ಹಾಗೂ ಗೀತಾ ಬೋರ್ಕರ್ ದಂಪತಿ ದೀಪ ಬೆಳಗುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಿಂದ ಆಗಮಿಸಿದ ಅರ್ಚಕ ರಾಜೇಶ್ ಭಟ್ ಶಿಬಿರದ ದಿನಚರಿ ಹಾಗೂ ಶಿಬಿರಾರ್ಥಿಗಳು ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಮತ್ತು ವೈದಿಕ ವಿಧಾನಗಳನ್ನು ವಿವರಿಸಿದರು.
ಒಟ್ಟು ಹದಿನೈದು ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್, ವೇಣುಗೋಪಾಲ್ ಭಟ್, ಆಡಳಿತ ಮಂಡಳಿ ಅಧ್ಯಕ್ಷ ಸಂತೋಷ್ ಬಿ.ಪಿ., ಶೈಲೇಶ್ ಕಾಮತ್, ಶಾಂತಿಭೂಷಣ್ ಬೋರ್ಕರ್, ಜ್ಯೋತಿ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.