ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮುಳುಗಡೆ
ಮಂಗಳೂರು, ಮೇ ೧೫: ಸಮುದ್ರ ತೀರದಿಂದ ೬೦ ನಾಟಿಕಲ್ ಮೈಲ್ ದೂರದಲ್ಲಿ ಎಂಎಸ್‌ವಿ ಸಲಾಮತ್ ಹೆಸರಿನ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಮಂಗಳೂರಿನ ಸರಕು ಸಾಗಣೆ ಹಡಗು ಸಮುದ್ರ ಮಧ್ಯದಲ್ಲಿ ಮುಳುಗಡೆಯಾದ ಮಾಹಿತಿ ದೊರೆತಿದೆ. ಸರಕು ಸಾಗಣೆ ಹಡಗು ೨೦೨೫ರ ತಾ. ೧೨ ರಂದು ಮಂಗಳೂರು ಬಂದರಿನಿAದ ಲಕ್ಷದ್ವೀಪದತ್ತ ಪ್ರಯಾಣ ಆರಂಭಿಸಿತ್ತು ತಾ. ೧೮ ರಂದು ಲಕ್ಷದ್ವೀಪದ ಕಡಮತ್ ದ್ವೀಪಕ್ಕೆ ತಲುಪಬೇಕಾಗಿತ್ತು ಹಡಗಿನಲ್ಲಿ ೬ ಭಾರತೀಯ ಸಿಬ್ಬಂದಿ ಮತ್ತು ಸಿಮೆಂಟ್ ಹಾಗೂ ನಿರ್ಮಾಣ ಸಾಮಗ್ರಿ ಇದ್ದು ಸಮುದ್ರ ಮಧ್ಯೆ ತಾಂತ್ರಿಕ ಸಮಸ್ಯೆಯಿಂದ ನೀರು ನುಗ್ಗಿದ್ದು, ಹಡಗು ಮುಳುಗಿದೆ. ಈ ವೇಳೆ ಎಲ್ಲಾ ೬ ಸಿಬ್ಬಂದಿ ಹಡಗಿನಿಂದ ಹಾರಿ ಸಣ್ಣ ಡಿಂಗಿ ಬೋಟಿನಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆAದು ತಿಳಿದಿದೆ. ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯ ನಡೆಸಿದ್ದು ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ನ ‘ವಿಕ್ರಂ’ ಶಿಪ್‌ನಲ್ಲಿ ರಕ್ಷಣಾ ಕಾರ್ಯ ನಡೆಸಿದ್ದು ಇಸ್ಮಾಯಿಲ್ ಶರೀಫ್, ಅಲೆಮನ್ ಅಹ್ಮದ್ ಬಾಯ್ ಗಾವ್ಡ, ಕಾಕಲ್ ಸುಲೇಮಾನ್ ಇಸ್ಮಾಯಿಲ್, ಅಕ್ಬರ್ ಅಬ್ದುಲ್ ಸುರಾನಿ, ಕಸಂ ಇಸ್ಮಾಯಿಲ್ ಮತ್ತು ಅಜ್ಮಲ್ ಅವರುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ಮೈಕ್ರೋ ಫೈನಾನ್ಸ್ ಹಗರಣ; ನಾಲ್ವರ ಬಂಧನ
ಬೆಳಗಾವಿ, ಮೇ ೧೫: ಬೆಳಗಾವಿ ಜಿಲ್ಲೆಯಲ್ಲಿ ನಡೆದ ಬೃಹತ್ ಸಾಲ ಹಗರಣವೊಂದು ಭಾರೀ ಸಂಚಲನ ಮೂಡಿಸಿದ್ದು, ಮೈಕ್ರೋಫೈನಾನ್ಸ್ ಸಾಲ ಮಂಜೂರಾತಿ ನೆಪದಲ್ಲಿ ಮಹಿಳೆಯರು ಸೇರಿದಂತೆ ಸುಮಾರು ೭,೭೦೦ಕ್ಕೂ ಹೆಚ್ಚು ವ್ಯಕ್ತಿಗಳು ಒಟ್ಟು ೧೯.೩೫ ಕೋಟಿ ರೂ.ಗಳಷ್ಟು ಹಣ ಕಳೆದುಕೊಂಡಿದ್ದಾರೆ. ಯಮನಾಪುರ, ಹಾಲ್ಭಾವಿ, ಕಂಗ್ರಾಲಿ ಕೆಎಚ್ ಮತ್ತು ಕಂಗ್ರಾಲಿ ಬಿಕೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಈ ಹಗರಣಕ್ಕೆ ಸಂಬAಧಿಸಿದAತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಅಶ್ವಿನಿ ಹೊಳೆಪ್ಪ ದಡ್ಡಿ, ಹೊಳೆಪ್ಪ ಫಕೀರಪ್ಪ ದಡ್ಡಿ, ಶೇವಂತಿ ಹೊಳೆಪ್ಪ ದಡ್ಡಿ ಮತ್ತು ಪ್ರಿಯಾಂಕಾ ಹೊಳೆಪ್ಪ ದಡ್ಡಿ ಎಂದು ಗುರುತಿಸಲಾಗಿದೆ, ಇವರೆಲ್ಲರೂ ಬೆಳಗಾವಿ ತಾಲೂಕಿನ ಯಮನಾಪುರ ನಿವಾಸಿಗಳು. ಬೆಳಗಾವಿ ತಾಲೂಕಿನಲ್ಲಿ ಆರಂಭವಾದ ಈ ಹಗರಣವು ಜಿಲ್ಲೆಯಾದ್ಯಂತ ಮತ್ತು ಕರ್ನಾಟಕದ ಇತರ ಭಾಗಗಳಿಗೆ ಹರಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋನಟ್ಟಿ ಗ್ರಾಮದ ನಿವಾಸಿ ಶೇಖಾ ಕಣ್ಣಪ್ಪ ಹಂಚಿನ್ಮನಿ ಎಂಬವರು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ನಂತರ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಯಮನಾಪುರದ ನಾಲ್ವರು ವ್ಯಕ್ತಿಗಳು ಸಬ್ಸಿಡಿ ಸಾಲಗಳನ್ನು ನೀಡುವುದಾಗಿ ಭರವಸೆ ನೀಡುವ ಮೂಲಕ ಈ ಯೋಜನೆಯನ್ನು ರೂಪಿಸಿದ್ದರು. ಸಾಲ ನೀಡಿದ ನಂತರ, ಶೇ. ೬೦ ರಷ್ಟು ಹಣವನ್ನು ತೆಗೆದುಕೊಳ್ಳಲಾಗುವುದು ಮತ್ತು ಉಳಿದ ಶೇ. ೪೦ ರಷ್ಟು ಹಣವನ್ನು ಸಾಲಗಾರರಿಗೆ ಸಬ್ಸಿಡಿಯಾಗಿ ನೀಡಲಾಗುವುದು ಎಂದು ಹೇಳಿಕೊಂಡು ಅವರು ಜನರನ್ನು ಆಕರ್ಷಿಸಿದರು. ಸಾಲಗಾರನ ಪರವಾಗಿ ಪೂರ್ಣ ಸಾಲದ ಮೊತ್ತವನ್ನು ಅಂತಿಮವಾಗಿ ಮರುಪಾವತಿಸುವುದಾಗಿ ಅವರು ಸಂತ್ರಸ್ತರಿಗೆ ಮತ್ತಷ್ಟು ಭರವಸೆ ನೀಡಿದರು ಎಂದು ದೂರುದಾರರು ಹೇಳಿದ್ದಾರೆ.
ಪಾಕ್ ಬೆಂಬಲಿಸಿದ್ದ ಟರ್ಕಿಗೆ ಭಾರತದಿಂದ ದೊಡ್ಡ ಹೊಡೆತ
ನವದೆಹಲಿ, ಮೇ ೧೫: ಟರ್ಕಿ ಕಂಪೆನಿ ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್‌ಗೆ ಸಂಬAಧಿಸಿದAತೆ ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರ ಸೆಲೆಬಿ ಕಂಪೆನಿಯ ಭದ್ರತಾ ಅನುಮತಿಯನ್ನು ರದ್ದುಗೊಳಿಸಿದೆ. ಈ ಕಂಪೆನಿಯು ಮುಂಬೈ ವಿಮಾನ ನಿಲ್ದಾಣದಲ್ಲಿ ನೆಲದ ನಿರ್ವಹಣೆಯನ್ನು ಮಾಡುತ್ತದೆ. ಇದರರ್ಥ ಕಂಪೆನಿಯು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡುವುದು, ಸಾಮಗ್ರಿಗಳನ್ನು ನೋಡಿಕೊಳ್ಳುವುದು ಮತ್ತು ವಿಮಾನಗಳನ್ನು ನಿರ್ವಹಿಸಲು ಸಹಾಯ ಮಾಡುವಂತಹ ಕೆಲಸಗಳನ್ನು ನಿರ್ವಹಿಸುತ್ತದೆ. ಮುಂಬೈ ವಿಮಾನ ನಿಲ್ದಾಣದ ನೆಲದ ಕಾರ್ಯಾಚರಣೆಗಳಲ್ಲಿ ಸುಮಾರು ಶೇ. ೭೦ ರಷ್ಟನ್ನು ಸೆಲೆಬಿ ಕಂಪೆನಿ ನಿರ್ವಹಿಸುತ್ತದೆ. ಇದರಲ್ಲಿ ಪ್ರಯಾಣಿಕರ ಸೇವೆ, ಹೊರೆ ನಿಯಂತ್ರಣ, ವಿಮಾನ ಕಾರ್ಯಾಚರಣೆಗಳು, ಸರಕು ಮತ್ತು ಅಂಚೆ ಸೇವೆ, ಗೋದಾಮು ಮತ್ತು ಸೇತುವೆ ಕಾರ್ಯಾಚರಣೆಗಳು ಸೇರಿವೆ. 'ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೆöÊವೇಟ್ ಲಿಮಿಟೆಡ್‌ಗೆ ಗ್ರೌಂಡ್ ಹ್ಯಾಂಡ್ಲಿAಗ್ ಏಜೆನ್ಸಿಯಾಗಿ ಡಿಜಿ, ಬಿಸಿಎಎಸ್ ಅವರು ೨೦೨೨ರ ನವೆಂಬರ್ ೨೧ರಂದು ಭದ್ರತಾ ಅನುಮತಿಯನ್ನು ನೀಡಿದ್ದಾರೆ' ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಈಗ ಡಿಜಿ, ಬಿಸಿಎಎಸ್ ಅವರಿಗೆ ಇರುವ ಅಧಿಕಾರವನ್ನು ಬಳಸಿಕೊಂಡು, ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೆöÊವೇಟ್ ಲಿಮಿಟೆಡ್‌ನ ಭದ್ರತಾ ಅನುಮತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಇದು ಭಾರತ ಮತ್ತು ಟರ್ಕಿ ನಡುವಿನ ಸಂಬAಧವನ್ನು ಹದಗೆಡಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ತನ್ನ ವಿದೇಶಾಂಗ ನೀತಿಯನ್ನು ಸಹ ಬದಲಾಯಿಸಿದೆ. ಭಾರತವು ಟರ್ಕಿಯನ್ನು ವಿರೋಧಿಸುವ ದೇಶಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಮತ್ತು ಈ ಪ್ರದೇಶದ ಪ್ರಮುಖ ಶಕ್ತಿಗಳೊಂದಿಗೆ ಸ್ನೇಹವನ್ನು ಬೆಳೆಸುತ್ತಿದೆ. ಟರ್ಕಿಯ ಪ್ರಭಾವವನ್ನು ಕಡಿಮೆ ಮಾಡಲು ಭಾರತವು ಕೆಲವು ದೇಶಗಳೊಂದಿಗೆ ತನ್ನ ಸ್ನೇಹವನ್ನು ಮತ್ತಷ್ಟು ಬಲಪಡಿಸಿದೆ. ಇದರಲ್ಲಿ ಗ್ರೀಸ್, ಅರ್ಮೇನಿಯಾ ಮತ್ತು ಸೈಪ್ರಸ್‌ನಂತಹ ದೇಶಗಳು ಸೇರಿವೆ. ಈ ದೇಶಗಳು ಐತಿಹಾಸಿಕವಾಗಿ ಟರ್ಕಿಯನ್ನು ವಿರೋಧಿಸುತ್ತಿವೆ. ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕಾಗಿ ಭಾರತೀಯರು ಟರ್ಕಿ, ಅಜೆರ್ಬೈಜಾನ್ ಅನ್ನು ಬಹಿಷ್ಕರಿಸಿದೆ ಎಂದು ವರದಿಯಾಗಿತ್ತು. ಈಗ ಸರ್ಕಾರ ಕೂಡ ಈ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಂಡಿದೆ.
ಆನೆಗಳಿಗೆ ರೈಲು ಡಿಕ್ಕಿ ಹೊಡೆಯುವುದನ್ನು ತಡೆಯಲು ಎಐ ಬಳಕೆ
ನವದೆಹಲಿ, ಮೇ ೧೫: ಭಾರತೀಯ ರೈಲ್ವೆ ಈಗ ವಿವಿಧ ಪ್ರದೇಶಗಳಲ್ಲಿ ರೈಲ್ವೆ ಹಳಿಗೆ ವನ್ಯಜೀವಿಗಳು, ವಿಶೇಷವಾಗಿ ಆನೆಗಳು ನುಗ್ಗುವುದನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಆಧಾರಿತ ಡಿಸ್ಟಿçಬ್ಯೂಟೆಡ್ ಅಕೌಸ್ಟಿಕ್ ಸೆನ್ಸಿಂಗ್ ವ್ಯವಸ್ಥೆಯನ್ನು ಬಳಸುತ್ತಿದೆ. ಈ ವ್ಯವಸ್ಥೆಯು ಹಳಿಗಳ ಮೇಲೆ ಅಥವಾ ಹತ್ತಿರದಲ್ಲಿ ಆನೆಗಳ ಚಲನೆಯ ಬಗ್ಗೆ ಲೋಕೋ ಪೈಲಟ್‌ಗಳು, ಸ್ಟೇಷನ್ ಮಾಸ್ಟರ್‌ಗಳು ಮತ್ತು ನಿಯಂತ್ರಣ ಕೊಠಡಿಗೆ ಏಕಕಾಲದಲ್ಲಿ ಮಾಹಿತಿ ರವಾನಿಸುತ್ತದೆ. ಈ ಮೂಲಕ ರೈಲು ಆನೆಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಪ್ರಸ್ತುತ, ರೈಲ್ವೆ ಸಚಿವಾಲಯದ ಅಧಿಕೃತ ಮೂಲದ ಪ್ರಕಾರ, ಈಶಾನ್ಯ ಗಡಿನಾಡು ರೈಲ್ವೆ ಅಡಿಯಲ್ಲಿ ಅರಣ್ಯ ಇಲಾಖೆಯಿಂದ ಗುರುತಿಸಲ್ಪಟ್ಟ ನಿರ್ಣಾಯಕ ಮತ್ತು ದುರ್ಬಲ ಸ್ಥಳಗಳಲ್ಲಿ ೧೪೧ ರೂಟ್ ಕಿಲೋಮೀಟರ್‌ಗಳಲ್ಲಿ ಡಿಎಎಸ್‌ಅನ್ನು ಅಳವಡಿಸಲಾಗುತ್ತಿದೆ. ಈ ಎಐ ಆಧಾರಿತ ಡಿಎಎಸ್ ತಂತ್ರಜ್ಞಾನದ ಪರಿಣಾಮವಾಗಿ, ರೈಲುಗಳ ಡಿಕ್ಕಿಯಿಂದ ಉಂಟಾದ ಆನೆಗಳ ಸಾವಿನ ಸಂಖ್ಯೆ ೨೦೧೩ ರಲ್ಲಿ ೨೬ ರಿಂದ ೨೦೨೪ ರಲ್ಲಿ ಕೇವಲ ೧೨ಕ್ಕೆ ಇಳಿದಿದೆ ಎಂದು ಸಚಿವಾಲಯ ಗುರುವಾರ ತಿಳಿಸಿದೆ. ಇಸಿಆರ್ ರೈಲ್ವೆ ವಲಯಗಳ ಅಡಿಯಲ್ಲಿ ಒಟ್ಟು ರೂ. ೨೦೮ ಕೋಟಿ ವೆಚ್ಚದಲ್ಲಿ ಒಟ್ಟು ೧,೧೫೮ ಕಿಲೋಮೀಟರ್ ಉದ್ದವನ್ನು ಒಳಗೊಂಡಿರುವ ಗುರುತಿಸಲಾದ ಕಾರಿಡಾರ್‌ಗಳಿಗೆ ಈ ಎಐ ಆಧಾರಿತ ಡಿಎಎಸ್ ಅಳವಡಿಸಲು ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಬಿಬಿಎಂಪಿ ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗ್ರೇಟರ್
ಬೆಂಗಳೂರು, ಮೇ ೧೫: ಮೊದಲು ನಗರ ಪಾಲಿಕೆ, ಮಹಾನಗರ ಪಾಲಿಕೆ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿದ್ದುದು ಗ್ರೇಟರ್ ಬೆಂಗಳೂರು ಆಗಿ ಬದಲಾಗಲಿದೆ. ಇನ್ನು ಮುಂದೆ ಬಿಬಿಎಂಪಿ ಇತಿಹಾಸದ ಪುಟ ಸೇರಲಿದ್ದು ಇನ್ನೇನಿದ್ದರೂ ಗ್ರೇಟರ್ ಬೆಂಗಳೂರು ಆಡಳಿತ ಜಾರಿಗೆ ಬರಲಿದೆ ಇದಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, ೨೦೨೪ (೨೦೨೫ರ ಕರ್ನಾಟಕ ಅಧಿನಿಯಮ ಸಂಖ್ಯೆ ೩೬) ರ ಒಂದನೇ ಪ್ರಕರಣದ (೩)ನೇ ಉಪ ಪ್ರಕರಣದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರ ಈ ಮೂಲಕ ಅಧಿನಿಯಮವನ್ನು ಎಲ್ಲಾ ಪ್ರಕರಣಗಳು ಹಾಗೂ ಉಪ ಬಂಧಗಳು ಜಾರಿಗೆ ಬರತಕ್ಕದೆಂದು ಗೊತ್ತುಪಡಿಸಿದೆ. ಜಾರಿಗೆ ಬರಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಡಿಸಿಎಂ ಅವರು ಉಪಾಧ್ಯಕ್ಷರಾಗಲಿದ್ದು ಬಿಬಿಎಂಪಿ ಆಡಳಿತಾಧಿಕಾರಿ ಯಾಗಿರುವ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರು ಜಿಬಿಎ ಮುಖ್ಯ ಕಾರ್ಯನಿರ್ವಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.